ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ಹೊಸದಾಗಿ 185 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮುಂದಾದ ಸರ್ಕಾರ

ಗೋವಿಂದರಾಜು ವಿ.
Published 5 ಜನವರಿ 2024, 6:32 IST
Last Updated 5 ಜನವರಿ 2024, 6:32 IST
ಅಕ್ಷರ ಗಾತ್ರ

ಹಾರೋಹಳ್ಳಿ: ರಾಜ್ಯ ಸರ್ಕಾರ ರಾಜ್ಯದಾದ್ಯಂತ ಹೊಸದಾಗಿ 185 ಇಂದಿರಾ ಕ್ಯಾಂಟೀನ್‌ಗಳನ್ನು ಮುಂದಾಗಿದೆ. ಅದರಂತೆ, ರಾಮನಗರ ಜಿಲ್ಲೆಯ ಪಟ್ಟಣ ಪಂಚಾಯಿತಿ ಕೇಂದ್ರವಾದ ಹಾರೋಹಳ್ಳಿ ಮತ್ತು ಪುರಸಭೆ ಕೇಂದ್ರವಾದ ಬಿಡದಿಯಲ್ಲಿ ಹೊಸದಾಗಿ ಕ್ಯಾಂಟೀನ್‌ಗಳು ತಲೆ ಎತ್ತಲಿವೆ. ಕ್ಯಾಂಟೀನ್ ಆರಂಭಿಸುವ ಕುರಿತು ನಗರಾಭಿವೃದ್ಧಿ ಇಲಾಖೆಯು ಡಿ. 2ರಂದು ಆದೇಶ ಹೊರಡಿಸಿದೆ.

ಹೊಸ ಕ್ಯಾಂಟೀನ್‌ಗಳೊಂದಿಗೆ ಜಿಲ್ಲೆಯಲ್ಲಿರುವ ಒಟ್ಟು ಕ್ಯಾಂಟೀನ್‌ಗಳ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ. ಈಗಾಗಲೇ ತಾಲ್ಲೂಕು ಕೇಂದ್ರಗಳಾದ ಮಾಗಡಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ತಲಾ ಒಂದೊಂದು ಕ್ಯಾಂಟೀನ್‌ಗಳು ಬಡವರ ಹಸಿವು ನೀಗಿಸುತ್ತಿವೆ.

2013ರಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಇದೀಗ, ಎರಡನೇ ಸಲ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮತ್ತಷ್ಟು ಪಟ್ಟಣಗಳಿಗೆ ಕ್ಯಾಂಟೀನ್‌ಗಳನ್ನು ತೆರೆಯುವ ಕುರಿತು ಹೇಳಿದ್ದರು.

₹165 ಕೋಟಿ ಅನುದಾನ: ಅದರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದ 31 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 165 ಹಾಗೂ 10 ಮಹಾನಗರ ಪಾಲಿಕೆಗಳ 20 ಕಡೆಗಳಲ್ಲಿ ಮುಂಬರುವ ದಿನಗಳಲ್ಲಿ ಅಡುಗೆ ಸಹಿತ ಕ್ಯಾಂಟೀನ್‌ಗಳು ಶುರುವಾಗಲಿವೆ. ಇದಕ್ಕಾಗಿ ₹154 ಕೋಟಿ ಅನುದಾನ ನೀಡಲಾಗಿದೆ.

ಕ್ಯಾಂಟೀನ್‌ಗಳಲ್ಲಿ ಊಟದ ಲೆಕ್ಕ ವ್ಯತ್ಯಾಸ ಮಾಡಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಲಾಗುತ್ತಿದ್ದಾರೆ ಎಂಬು ಆರೋಪಗಳು ಹಲವೆಡೆ ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕ್ಯಾಂಟೀನ್‌ ಬಿಲ್‌ಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಆ ಮೂಲಕ, ಕ್ಯಾಂಟೀನ್ ಊಟದ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತು ನೀಡಿದೆ.

ಊಟದ ಮೆನು: ಈಗಾಗಲೇ ಇರುವ ಊಟದ ಮೆನುವಿನ ಜೊತೆಗೆ, ಹಿರಿಯ ನಾಗರಿಕರಿಗೆ ಅನ್ನದ ಬದಲಿಗೆ ಮುದ್ದೆ ಮತ್ತು ಚಪಾತಿ ನೀಡಲು ನಿರ್ಧರಿಸಲಾಗಿದೆ. ಉಳಿದಂತೆ ಉಪಾಹಾರ ಮತ್ತು ಊಟದ ಮೆನು ಎಂದಿನಂತೆ ಮುಂದುವರಿಯಲಿದೆ.

ನಟರಾಜ್ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ
ನಟರಾಜ್ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ
ಹಾರೋಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಆಗುವುದರಿಂದ ರೈತರು ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುವುದು
– ನಟರಾಜ್ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT