ರಾಮನಗರ: ‘ಮಳೆ ಕೊರತೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಬರದ ಸ್ಥಿತಿಗೆ ತಲುಪಿವೆ. ಹೀಗಿದ್ದರೂ, ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿ, ರಾಜ್ಯದ ರೈತರಿಗೆ ದ್ರೋಹ ಎಸಗಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
‘ಕಾವೇರಿ ನ್ಯಾಯಮಂಡಳಿ ತೀರ್ಪಿನಂತೆ ನೀರು ಬಿಡುವುದಕ್ಕೆ ಮುಂಚೆ, ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಸುಪ್ರೀಂಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿದ ಕೂಡಲೇ, ರಾಜ್ಯದ ರೈತರ ಹಿತವನ್ನು ಕಡೆಗಣಿಸಿ ನೀರು ಹರಿಸಿದ್ದು ಸರಿಯಲ್ಲ’ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಆದರೂ, ಕಾವೇರಿ ನೀರಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರ ಹಿಂದೆ ರೈತರ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಹೆಚ್ಚಾಗಿದೆ. ಇನ್ನು ಮುಂದೆ ನೀರು ಹರಿಸದೆ, ಬುದ್ಧಿವಂತಿಕೆಯ ಹೆಜ್ಜೆಯನ್ನಿಡಬೇಕು. ಮುಂಬರುವ ಸವಾಲುಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
‘ಕುಡಿಯುವ ನೀರಿನ ಕೊರತೆ ನೀಗಿಸುವ ಸಲುವಾಗಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಹಮ್ಮಿಕೊಂಡು, ರೈತರಿಗೆ ಭರವಸೆ ಮೂಡಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ತನ್ನ ಮಾತನ್ನು ಮರೆತಿದೆ. ಯೋಜನೆಯನ್ನು ತ್ವರಿತವಾಗಿ ಆರಂಭಿಸದೆ ವಿಳಂಬ ಮಾಡುತ್ತಿದೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೈರೇಗೌಡ ಮಾತನಾಡಿ ‘ರಾಮನಗರ ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಮಳೆ ಕೊರತೆಯಾಗಿದ್ದು, ಬರದ ಅಂಚಿಗೆ ಬಂದು ನಿಂತಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ಕುರಿತು ಮೇಲಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜಿಲ್ಲೆಯನ್ನು ಆದಷ್ಟು ಬೇಗ ಬರಪೀಡಿತ ಎಂದು ಘೋಷಿಸಿ, ರೈತರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.
ಸಂಘದ ಮಾದೇಗೌಡ, ಉಮೇಶ್ ಹಾಗೂ ಕೃಷ್ಣಪ್ಪ ಇದ್ದರು.
ವಸ್ತುಸ್ಥಿತಿ ಮನವರಿಕೆ ಮಾಡಿಕೊಡದ ಸರ್ಕಾರ ಸರ್ಕಾರಕ್ಕೆ ರಾಜಕೀಯ ಹಿತಾಸಕ್ತಿಯೇ ಹೆಚ್ಚು ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.