ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ಅವಳಿ ನಗರ

ಚನ್ನಪಟ್ಟಣದಲ್ಲಿ ಅಸ್ಪೃಶ್ಯತೆ ವಿರುದ್ಧ ಜನಜಾಗೃತಿ ಮೂಡಿಸಿದ್ದ ಮಹಾತ್ಮ ಗಾಂಧಿ
Last Updated 15 ಆಗಸ್ಟ್ 2022, 4:20 IST
ಅಕ್ಷರ ಗಾತ್ರ

ರಾಮನಗರ: ‘ಕ್ಲೋಸ್‌ ಪೇಟ್‌’ ಅರ್ಥಾತ್‌ ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಗಳು ದೇಶದ ಸ್ವಾತಂತ್ರ್ಯ ಚಳವಳಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಈಗ ಅದರ ಕುರುಹುಗಳೆಲ್ಲ ಒಂದೊಂದೇ ಮಾಯವಾಗಿ ಬರೀ ನೆನಪಷ್ಟೇ ಉಳಿದುಕೊಂಡಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಕಲಿಗಳು ಈ ನೆಲದಲ್ಲಿ ಜೀವಿಸಿದ್ದರು ಎಂಬುದು ವಿಶೇಷ. ನಾಡು ಕಂಡ ಹಿರಿಯ ಗಾಂಧಿವಾದಿಗಳಲ್ಲಿ ಒಬ್ಬರಾದ ದೊರೆಸ್ವಾಮಿ ಅವರ ಊರು ಹಾರೋಹಳ್ಳಿ. ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಸಹ ಬ್ರಿಟಿಷರ ದಾಸ್ಯ ಸಂಕೋಲೆ ಕಳಚಲು ಹೋರಾಡಿದ ನೇತಾರ. ಇಂತಹ ಅಸಂಖ್ಯ ಮಂದಿಯ ಹೆಸರು ಮಣ್ಣಲ್ಲಿ ಹುದುಗಿ ಹೋಗಿದೆ.

‘ಹಳೇ ಮೈಸೂರು ಪ್ರಾಂತ್ಯವು ರಾಜರ ಆಳ್ವಿಕೆಯಲ್ಲಿ ಇತ್ತು. ಹೀಗಾಗಿ ಇಲ್ಲಿನ ಜನರು ರಾಜರ ಬಗ್ಗೆ ಗೌರವ ಇಟ್ಟುಕೊಂಡೇ ಸ್ವಾತಂತ್ರ್ಯ ಚಳವಳಿಗೂ ಕೈ ಜೋಡಿಸಿದ್ದರು. ಅದರಲ್ಲೂ ಶಿವಪುರ ಕಾಂಗ್ರೆಸ್‌ ಅಧಿವೇಶನದ ಬಳಿಕ ಇಲ್ಲಿ ಚಳವಳಿಯ ಕಿಚ್ಚು ಹೆಚ್ಚಾಯಿತು’ ಎಂದು ವಿವರಿಸುತ್ತಾರೆ ಇತಿಹಾಸ ಪ್ರಾಧ್ಯಾಪಕರಾದ ಕೃಷ್ಣೇಗೌಡ.

ಕೆಂಗಲ್‌ ಹನುಮಂತಯ್ಯನವರ ಜೊತೆಗೆ ಎಸ್. ಕರಿಯಪ್ಪ, ಕೃಷ್ಣಯ್ಯ ಮಾಸ್ಟರ್‌, ಸುಬ್ಬರಾವ್‌, ಗಿರಿಯಪ್ಪ, ಚನ್ನಪಟ್ಟಣದ ವಿ. ವೆಂಕಟಪ್ಪ, ಕೆ. ವೀರಣ್ಣ ಗೌಡ, ಕನಕಪುರದ ಸರ್ದಾರ್ ವೆಂಕಟರಾಮಯ್ಯ ಮತ್ತು ಅವರ ಮಡದಿ ಗೌರಮ್ಮ, ಮಾಗಡಿಯ ಶಿವರಾಮ ಸಿಂಗ್, ಸೋಲೂರು ಸಿದ್ದಪ್ಪ, ಗೊಲ್ಲಳ್ಳಿ ಚಿಕ್ಕೇಗೌಡ... ಹೀಗೆ ಈ ಭಾಗದಲ್ಲಿ ಹೋರಾಟದ ಮುಂಚೂಣಿ ವಹಿಸಿದ್ದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಮರಳಿ ಗೂಡಿಗೆ: 1938ರಲ್ಲಿ ಶಿವಪುರ ಕಾಂಗ್ರೆಸ್‌ ಅಧಿವೇಶನಕ್ಕೆ ಮುನ್ನ ಕನಕಪುರಲ್ಲಿ ಮರಳಿ ಗೂಡಿಗೆ ಎನ್ನುವ ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯ ಚಳವಳಿಯ ಕಾರಣಕ್ಕೆ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡವರನ್ನು ಅಂದು ಗಾಡಿಯಲ್ಲಿ ಕೂರಿಸಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಇಂದೊಂದು ನೆನಪಿನಲ್ಲಿ ಉಳಿದಿರುವ ಘಟನೆ ಎಂದು ವಿವರಿಸುತ್ತಾರೆ ಕೃಷ್ಣೇಗೌಡ.

1942ರಲ್ಲಿ ತಿಟ್ಟಮಾರನಹಳ್ಳಿಯಲ್ಲಿ ನಡೆದ ಮೂರನೇ ಮೈಸೂರು ಕಾಂಗ್ರೆಸ್ ಅಧಿವೇಶನ ಒಂದು ಮೈಲಿಗಲ್ಲು. ಊಮಾಬಾಯಿ ಕುಂದಾಪುರ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ಜೊತೆಗೆ ಕನಕಪುರದ ಕಾವೇರಮ್ಮ, ಬೈರಾಪಟ್ಟಣದ ಕಮಲಮ್ಮ, ಸಾರಥಿ ಅಂಕುಗೌಡ ಮೊದಲಾದವರು ಸಾರಥ್ಯ ವಹಿಸಿದ್ದರು.

ಸಂಸ್ಥಾನದ ವಿರುದ್ಧವೂ ಧ್ವನಿ: ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಕೆಂಗಲ್ ಹನುಮಂತಯ್ಯ ರಾಜಪ್ರಭುತ್ವದ ವಿರುದ್ಧ ಧ್ವನಿ ಎತ್ತುವಷ್ಟು ಪ್ರಬಲರಾಗಿದ್ದರು. ಇದೇ ಕಾರಣಕ್ಕೆ ರಾಜದ್ರೋಹ ಆರೋಪದ ಅಡಿ ಅವರನ್ನು ಬಂಧಿಸಲಾಗಿತ್ತು. ಮಾಯಗಾನಹಳ್ಳಿ ಬಳಿ ವಾಸವಿದ್ದ ಗಿರಿಯಪ್ಪ ಅವರಿಗೆ ಮಿರ್ಜಾ ಇಸ್ಮಾಯಿಲ್‌ ಜಮೀನಿನ ಆಮಿಷವೊಡ್ಡಿ ಕಾಂಗ್ರೆಸ್‌ನಿಂದ ದೂರ ಉಳಿಯುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಮಣಿಯದ ಗಿರಿಯಪ್ಪ, ಪ್ರಬಲವಾದ ಚಳವಳಿಯನ್ನೇ ಸಂಘಟಿಸಿದ್ದರು ಎಂಬುದು ದಾಖಲೆಗಳಲ್ಲಿದೆ ಎನ್ನುತ್ತಾರೆ ಕೃಷ್ಣೇಗೌಡ.

ಜಾತ್ರೆಯಲ್ಲಿ ಬಾಯಿ ಬಡಿದುಕೊಂಡರು: ಶಿವಪುರ ಅಧಿವೇಶನಕ್ಕೆ ಪೂರ್ವದಲ್ಲಿ ಮಾಗಡಿ ರಂಗಸ್ವಾಮಿ ಜಾತ್ರೆ ನಡೆದಿತ್ತು. ಆ ಸಂದರ್ಭ ಜನರನ್ನು ಸೇರಿಸುವ ಸಲುವಾಗಿ ಗೊಲ್ಲಹಳ್ಳಿ ಚಿಕ್ಕೇಗೌಡರು ಬಾಯಿ ಬಡಿದುಕೊಂಡು ಓಡಾಡಿದ್ದರು. ಆ ನಂತರ ಎಚ್‌.ಕೆ. ವೀರಣ್ಣ ಗೌಡ ಜನರನ್ನು ಉದ್ದೇಶಿಸಿ ಜಾಗೃತಿ ಮೂಡಿಸಿದ್ದರು. ‘ನಾವು ಗುಲಾಮರ ಗುಲಾಮರಾಗಿ ಉಳಿಯುವುದು ಬೇಡ’ ಎಂದು ಎಚ್ಚರಿಸಿದ್ದರು. ಶಿವಪುರ ಅಧಿವೇಶನ, ಧ್ವಜ ಸತ್ಯಾಗ್ರಹಕ್ಕೆ ಇಲ್ಲಿನ ಮಂದಿ ಸಾಕಷ್ಟು ಧವಸ–ಧಾನ್ಯ ನೀಡಿ ಪ್ರೋತ್ಸಾಹಿಸಿದ್ದರು.


ಅಸ್ಪೃಶ್ಯತೆ ವಿರುದ್ಧ ಸಮರ: 1934ರಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಮೊದಲು ನನ್ನನ್ನು ಹರಿಜನ ಕೇರಿಗೆ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದರು. ಸ್ಥಳೀಯ ನಾಯಕರು ಅವರನ್ನು ಮಂಗಳವಾರಪೇಟೆಯ ಆದಿಜಾಂಬವ ಕೇರಿಗೆ ಅವರನ್ನು ಕರೆದುಕೊಂಡು ಹೋದರು. ಗಾಂಧೀಜಿ ಅಲ್ಲಿದ್ದ ಬಾವಿಯಿಂದ ನೀರನ್ನು ತೆಗೆದು ಎಲ್ಲಾ ವರ್ಗದ ಜನರಿಗೂ ಹಾಕಿ ‘ಇನ್ನು ಮುಂದೆ ಅಸ್ಪೃಶ್ಯತೆ ಆಚರಣೆ ಮಾಡಬೇಡಿ’ ಎಂದರು ಎಂಬುದು ದಾಖಲೆಗಳಲ್ಲಿ ದಾಖಲಾದರು.

ಚನ್ನಪಟ್ಟಣದ ಈಗಿನ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗಾಂಧಿ ಭವನದ ಬಳಿ ತಿಟ್ಟಮಾರನಹಳ್ಳಿ ವೆಂಕಟಪ್ಪ, ಆರ್ಯ ಮೂರ್ತಿ ಅವರನ್ನು ಭೇಟಿ ಮಾಡಿದರು. ನಂತರ ಹರಿಜನೋದ್ಧಾರ ನಿಧಿಗಾಗಿ ಸಂಗ್ರಹವಾಗಿದ್ದ ₹140 ತೆಗೆದುಕೊಂಡು ಹೋದರು ಎಂದು ತಿಳಿಸಿದರು.

ರಾಮನಗರದಲ್ಲಿ ಮಹಾತ್ಮಗಾಂಧಿ ಭೇಟಿಯ ನೆನಪಿಗಾಗಿ ರಸ್ತೆಯೊಂದಕ್ಕೆ ಅವರ ಹೆಸರು ಇಡಲಾಗಿದೆ. ಈ ಹಿಂದೆ ಗಾಂಧಿ ನಿಂತು ಮಾತನಾಡಿದ್ದ ಜಾಗದಲ್ಲಿ ನಗರಸಭೆ ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ. ಸ್ವಾತಂತ್ರ್ಯದ ಕುರುಹುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದರ ಬಗ್ಗೆ ಮಾಹಿತಿ ನೀಡುವ ಕೆಲಸ ಇನ್ನಾದರೂ ಆಗಬೇಕಿದೆ.

ಗಾಂಧಿ ಭೇಟಿಯ ನೆನಪು

ರಾಮನಗರ ಜಿಲ್ಲೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ನೆನಪು ಇಲ್ಲಿನ ಜನಮಾನಸದಲ್ಲಿ ಉಳಿದುಕೊಂಡಿದೆ.

1927ರ ಜುಲೈ 31ರಂದು ನಿಧಿ ಸಂಗ್ರಹಣೆಗಾಗಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು. ಅಲ್ಲದೆ, 1934ರ ಜನವರಿ 6ರಂದು ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಭೇಟಿ ಕೊಟ್ಟರು ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ಈಗಿನ ಗಾಂಧಿ ಭವನ ಇರುವ ಸ್ಥಳಕ್ಕೆ ಭೇಟಿ ಕೊಟ್ಟು, ಸಾರ್ವಜನಿಕ ಬಾವಿಯೊಂದನ್ನು ಉದ್ಘಾಟಿಸಿದರು. ರಾಮನಗರದಲ್ಲಿ ಅರ್ಕಾವತಿ ನದಿ ಪಕ್ಕದ ಜಾಗದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಕನಕಪುರದಲ್ಲಿ ಈಗಿರುವ ರೂರಲ್‌ ಕಾಲೇಜಿನ ಆವರಣಕ್ಕೆ ಭೇಟಿ ನೀಡಿದ್ದರು ಎಂದು ಇತಿಹಾಸ ತಜ್ಞರು ನೆನಪು ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT