ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಲಿಂಗಯ್ಯ ಶೋಷಿತ ವರ್ಗದ ಧ್ವನಿ: ಸಾಹಿತ್ಯಾಸಕ್ತರ ಬಳಗದಿಂದ ನುಡಿ ನಮನ

Last Updated 14 ಜೂನ್ 2021, 3:14 IST
ಅಕ್ಷರ ಗಾತ್ರ

ಮಾಗಡಿ: ‘ಕವಿ ಡಾ.ಸಿದ್ಧಲಿಂಗಯ್ಯ ಮಾಗಡಿ ಸೀಮೆ ಮಣ್ಣಿನ ಸೌಹಾರ್ದ ಪಾರಂಪರಿಕ ಸಾಹಿತ್ಯದ ವಾರಸುದಾರರಾಗಿದ್ದಾರೆ’ ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ. ಶ್ರೀನಿವಾಸ್‌ ಹೇಳಿದರು.

ಪಟ್ಟಣದ ನಟರಾಜ ಬಡಾವಣೆಯಲ್ಲಿ ಶನಿವಾರ ಕರ್ನಾಟಕ ಪ್ರತಿಭಾ ಕೇಂದ್ರ ಮತ್ತು ಸಾಹಿತ್ಯಾಸಕ್ತರ ಬಳಗದಿಂದ ನಡೆದ ಕವಿ ಡಾ.ಸಿದ್ಧಲಿಂಗಯ್ಯಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧ್ವನಿಯಿಲ್ಲದ ತಳಸಮುದಾಯಗಳಿಗೆ ಹೋರಾಟದ ಹಾಡುಗಳನ್ನು ರಚಿಸುವ ಮೂಲಕ ಧ್ವನಿಯಾಗಿದ್ದರು. ಬಂಡಾಯ ಪರಂಪರೆಗೆ ನಾಂದಿ ಹಾಡಿದ್ದ ಅವರು ಸಾವನದುರ್ಗ, ಮಂಚನಬೆಲೆ, ಪಣಕನಕಲ್ಲಿನ ಪರಿಸರವನ್ನು ಮೆಚ್ಚಿಕೊಂಡಿದ್ದರು ಎಂದರು.

ತಾಲ್ಲೂಕಿನ ಶೋಷಿತರ ಮತ್ತು ಎಲ್ಲಾ ವರ್ಗದ ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಶೋಷಿತರು ಮೌಢ್ಯದಿಂದ ಹೊರಬರಬೇಕು. ಎಲ್ಲರೊಂದಿಗೆ ಕೂಡಿಬಾಳುವೆ ಮಾಡಬೇಕು ಎಂದು ತಾಲ್ಲೂಕಿನಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಷಣದ ಮೂಲಕ ತಮ್ಮ ಒಳಮನಸ್ಸಿನ ತುಡಿತವನ್ನು ಯುವಜನರಲ್ಲಿ ಬಿತ್ತಿ ಬೆಳೆಸಿದ್ದರು ಎಂದು ಸ್ಮರಿಸಿದರು.

‘ಮೌಲ್ಯಯುತವಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದ ಯಶಸ್ಸಿನ ಮೊದಲ ಮಾನದಂಡ ಬಂಡಾಯ ಸಾಹಿತ್ಯ ಎಂದು ಸಾರಿದರು. ಸಮಸಮಾಜದ ಕನಸು ಕಂಡಿದ್ದರು’ ಎಂದು ಹುಲಿಕಟ್ಟೆ ಎಚ್.ಜಿ. ಚನ್ನಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಗೋವಿಂದರಾಜುತಿಳಿಸಿದರು.

ಸ್ನಾತಕೋತ್ತರ ಪದವಿಯಲ್ಲಿ ನಮಗೆ ಗುರುಗಳಾಗಿದ್ದರು. ಪಂಪನಿಂದ ಕುವೆಂಪುವರೆಗಿನ ಕನ್ನಡ ಸಾಹಿತ್ಯದ ಕೃತಿಗಳನ್ನು ಅಧ್ಯಯನ ಮಾಡಬೇಕು. ಗ್ರಾಮೀಣ ತಳಸಮುದಾಯಗಳ ಜನಪದ ಸಾಹಿತ್ಯ, ಪರಂಪರೆಯನ್ನು ದಾಖಲಿಸುವಂತೆ ಎಚ್ಚರಿಸುತ್ತಿದ್ದರು. ಯಾರ ಮನಸ್ಸನ್ನು ನೋಯಿಸದ ಮೃದುಮಾತಿನ ಕವಿಯಾಗಿದ್ದರು. ವೈಚಾರಿಕತೆಗೆ ಒತ್ತು ನೀಡುವಂತೆ ತಿಳಿಸಿದ್ದರು ಎಂದರು.

ಶಿಕ್ಷಕ ಪತಿಗೌಡ ಮಾತನಾಡಿ, ಸಿದ್ಧಲಿಂಗಯ್ಯ ನಮ್ಮ ತಾಲ್ಲೂಕಿನ ಹೆಮ್ಮೆಯ ಸುಪುತ್ರ. ಕನ್ನಡಕ್ಕೆ ಅವಮಾನವಾದಾಗ ಹೋರಾಟ ನಡೆಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಬಿಸ್ಕೂರಿನ ಲಕ್ಷ್ಮೀನರಸಿಂಹಸ್ವಾಮಿ ಪ್ರೌಢಶಾಲೆಯ ಶಿಕ್ಷಕ ರಾಜಣ್ಣ ಮಾತನಾಡಿ, ‘ಸಿದ್ಧಲಿಂಗಯ್ಯ ಸಮನ್ವಯತೆ ಸಾಧಿಸಿದ್ದ ಕವಿ. ಶೋಷಣೆ ವಿರುದ್ಧ ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು’ ಎಂದರು.

ಶಿಕ್ಷಕ ಬಸವರಾಜು ಅವರು ಸಿದ್ಧಲಿಂಗಯ್ಯ ರಚಿಸಿರುವ ಕವನ ವಾಚಿಸಿದರು. ಕಲಾವಿದ ಅಂಗಡಿ ನಾಗರಾಜು ಲಾವಣಿ ಹಾಡಿದರು. ಸರ್ವೋದಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿದ್ದಣ್ಣ, ತಿರುಮಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಜಗದೀಶ್, ಶಿಕ್ಷಕಿ ನಾಗಮ್ಮ ನಾಗರಾಜ್, ಕೆಇಬಿ ನೌಕರ ಬಸವರಾಜು, ನಟರಾಜ ಬಡಾವಣೆಯ ನರಸಿಂಹಮೂರ್ತಿ, ಯಶಸ್, ಗೋವಿಂದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT