ದೇವೇಗೌಡರ ವಿಚಾರ ಮಾತನಾಡುವ ನೈತಿಕತೆ ಇಲ್ಲ: ಜೆಡಿಎಸ್‌ ಮುಖಂಡರ ಆಕ್ಷೇಪ

ಮಂಗಳವಾರ, ಏಪ್ರಿಲ್ 23, 2019
31 °C
ಬಿಜೆಪಿ ಮುಖಂಡ ಯೋಗೇಶ್ವರ್‌ ಹೇಳಿಕೆಗೆ ಆಕ್ಷೇಪ

ದೇವೇಗೌಡರ ವಿಚಾರ ಮಾತನಾಡುವ ನೈತಿಕತೆ ಇಲ್ಲ: ಜೆಡಿಎಸ್‌ ಮುಖಂಡರ ಆಕ್ಷೇಪ

Published:
Updated:
Prajavani

ಚನ್ನಪಟ್ಟಣ: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಸಿ.ಪಿ.ಯೋಗೇಶ್ವರ್ ಅವರಿಗೆ ಇಲ್ಲ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇವೇಗೌಡ ಅವರು ಒಕ್ಕಲಿಗ ಸಮುದಾಯವನ್ನು ಜೀತದಾಳು ಮಾಡಿಕೊಂಡಿದ್ದಾರೆ ಎಂಬ ಯೋಗೇಶ್ವರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಒಕ್ಕಲಿಗ ಜನಾಂಗವನ್ನು ಎಂದಿಗೂ ಆ ದೃಷ್ಟಿಕೋನದಿಂದ ನೋಡಿಲ್ಲ. ದೇವೇಗೌಡರಂತಹ ನಾಯಕರು ಒಕ್ಕಲಿಗ ಜನಾಂಗಕ್ಕೆ ಅವಶ್ಯಕವಾಗಿದ್ದಾರೆ ಎಂದರು.

‘ಒಬ್ಬ ಮಾಜಿ ಪ್ರಧಾನಿ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಯೋಗೇಶ್ವರ್ ಅವರಿಗೆ ಶೋಭೆ ಅಲ್ಲ. ದೇವೇಗೌಡ ಅವರು ನಿರ್ಮಾಣ ಮಾಡಿದ್ದ ಇಗ್ಗಲೂರು ಬ್ಯಾರೇಜ್ ನಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿ ತಾನು ನೀರಾವರಿ ಯೋಜನೆ ಜಾರಿಗೆ ತಂದೆ ಎಂದು ಹೇಳಿಕೊಳ್ಳುವ ಯೋಗೇಶ್ವರ್, ದೇವೇಗೌಡರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಎಲ್ಲ ನನ್ನಿಂದಲೇ ಎಂದು ಹೇಳಿಕೊಳ್ಳುವ ಯೋಗೇಶ್ವರ್ ಗೆ ಜನರು ಈಗಾಗಲೇ ಬುದ್ಧಿ ಕಲಿಸಿದ್ದಾರೆ’ ಎಂದರು.

ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವ ಯೋಗೇಶ್ವರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ತಮ್ಮ ಸಹೋದರನನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಾಡಿದ್ದರು, ತಮ್ಮ ಮಗಳಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸಲು ಯತ್ನಿಸಿದ್ದರು. ಇದು ಕುಟುಂಬ ರಾಜಕಾರಣ ಅಲ್ಲವೇ ಎಂದು ಕೇಳಿದರು.

ಬೇರೆಯವರ ಬಗ್ಗೆ ಆರೋಪ ಮಾಡುವವರು ತಾವು ಮೊದಲು ಎಷ್ಟರ ಮಟ್ಟಿಗೆ ಸರಿಯಾಗಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು.

ಯೊಗೇಶ್ವರ್ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕುಟುಂಬದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರಾಜಣ್ಣ ಎಚ್ಚರಿಸಿದರು.

ನಗರಸಭಾ ಸದಸ್ಯ ಉಮಾಶಂಕರ್ ಮಾತನಾಡಿ, ಕುಮಾರಸ್ವಾಮಿ ಅವರು ಕ್ಷೇತ್ರದ ಪ್ರಗತಿಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಯೋಗೇಶ್ವರ್ ಆರೋಪ ಮಾಡುತ್ತಿದ್ದಾರೆ. ಯೋಗೇಶ್ವರ್ ಅವಧಿಯಲ್ಲಿ ತಾಲ್ಲೂಕಿನಲ್ಲಿ ನಡೆದ ಕಾಮಗಾರಿಗಳು ಎಷ್ಟಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ತಾಲ್ಲೂಕಿನಲ್ಲಿ ಹಲವಾರು ಕಾಮಗಾರಿಗಳು ಆರಂಭಗೊಂಡಿವೆ. ನಿಂತು ಹೋಗಿದ್ದ ಎಲ್ಲ ಕಾಮಗಾರಿಗಳನ್ನು ಪುನರಾರಂಭ ಮಾಡಲಾಗಿದೆ. ಇನ್ನು ಆರು ತಿಂಗಳಲ್ಲಿ ತಾಲ್ಲೂಕು ಮಾದರಿ ತಾಲ್ಲೂಕು ಆಗುತ್ತದೆ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದುಕೃಷ್ಣೇಗೌಡ ಮಾತನಾಡಿ, ಯೋಗೇಶ್ವರ್ ಅವರು ಡಿ.ಕೆ. ಸಹೋದರರ ಆಸ್ತಿ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗಿದೆ ಎಂದು ಆರೋಪಿಸಿದ್ದಾರೆ. ಯೋಗೇಶ್ವರ್ ಆಸ್ತಿ ದ್ವಿಗುಣವಾಗಿಲ್ಲವೆ ಎಂದು ಪ್ರಶ್ನಿಸಿದ ಅವರು, ಮೊದಲು ಯೋಗೇಶ್ವರ್ ತಮ್ಮ ಆಸ್ತಿಯ ಮೂಲವನ್ನು ತಿಳಿಸಲಿ, ಆನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಮುಖಂಡರಾದ ರವೀಶ್, ಕಾಂತರಾಜು, ಶಿವರಾಮು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !