ಕುದೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ.ಕುಮಾರಸ್ವಾಮಿ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ಟೀಕಿಸಿದರು.
ಕಾಗಿಮಡು, ಅದರಂಗಿಯಲ್ಲಿ ಈಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ ಹಿರಿಯ ರಾಜಕೀಯ ಮುತ್ಸದ್ದಿ. ಮೇಕೆದಾಟು, ಕಾವೇರಿ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿರುವಾಗ ಹೆಚ್ಚುವರಿ ಡಿಸಿಎಂ ಹುದ್ದೆ ಅನವಶ್ಯ. ಪ್ರಸ್ತುತ ರಾಜ್ಯಕ್ಕೆ ಅನ್ಯಾಯವಾಗಿರುವ ಕಾವೇರಿ ನದಿ ನೀರು ಹಂಚಿಕೆ ಹಾಗೂ ಬರಪೀಡಿತ ಪ್ರದೇಶಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ. ಡಿಸಿಎಂ ಹುದ್ದೆ ವಿಚಾರ ಚರ್ಚೆ ಮಾಡಬೇಕು ಎನ್ನುವುದಾದರೆ ಹೈಕಮಾಂಡ್ ಅವರನ್ನು ಭೇಟಿ ಮಾಡಿ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಲಿ ಎಂದರು.
ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಕರ್ಮಭೂಮಿ ವೀರಾಪುರದಲ್ಲಿ 111 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ನಂತರ ಅನುದಾನ ನೀಡದೆ ಕಾಮಗಾರಿ ಕುಂಟುತ್ತಾ ಸಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಭಿವೃದ್ಧಿ ವಿಚಾರವಾಗಿ ಈಗಾಗಲೇ ಮೂರು ಭಾರಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಗೋಮಾಳ ಗುರುತಿಸಿ ಮೂರು ತಿಂಗಳೊಳಗೆ ಬಡವರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಲು ಎಂದರು.
ಅದರಂಗಿ ಗ್ರಾ.ಪಂ.ಅಧ್ಯಕ್ಷೆ ನಂಜಮ್ಮ, ಉಪಾಧ್ಯಕ್ಷ ರವಿಕುಮಾರ್ ಸದಸ್ಯರಾದ ಹೇಮಾವತಿ, ಬಸವರಾಜು, ಮುಖಂಡರಾದ ದೀಪು, ಮಂಜೇಶ್ ಕುಮಾರ್, ಮೃತ್ಯುಂಜಯಸ್ವಾಮಿ, ಪ್ರಕಾಶ್, ಸಿದ್ದಲಿಂಗಪ್ಪ, ಹೊನ್ನಪ್ಪ, ದೇವರಾಜು, ಇಒ ಚಂದ್ರು, ಟಿಎಚ್‌ಒ ಚಂದ್ರಶೇಖರ್, ಕೃಷಿ ಇಲಾಖೆ ವಿಜಯ ಸವಣೂರು, ಪಿಡಿಒ ಬಿ.ಎಂ ಪ್ರೇಮಾ, ಕಾರ್ಯದರ್ಶಿ ಜಿ.ಎಂ.ದೇವರಾಜು, ದಯಾನಂದ್, ಆಹಾರ ಇಲಾಖೆ ಗಣೇಶ್, ಲೋಕೋಪಯೋಗಿ ಇಲಾಖೆ ಶಿವಕುಮಾರ್, ಅರಣ್ಯ ಇಲಾಖೆ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.