ಶನಿವಾರ, ಜೂನ್ 19, 2021
27 °C

ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ವಿವಿಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ರಾಮನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿ.ಎ.ಆರ್) ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಮತ್ತು ಅವಿನಾಶ್ ಎಂಬುವರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು. ಮೂರು ವರ್ಷಗಳ ಹಿಂದೆ ದಾಖಲಾಗಿದ್ದ ಕೊಲೆ ಮತ್ತು ಸುಲಿಗೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಈ ನಡುವೆ ಇಲಾಖೆ ತನಿಖೆಯಲ್ಲಿ ಈ ಇಬ್ಬರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ವಜಾಗೊಂಡ ಕಾನ್‌ಸ್ಟೆಬಲ್‌ ಪ್ರಕಾಶ್ ಹಣಕಾಸಿನ ವಿಚಾರವಾಗಿ ಸಹೋದ್ಯೋಗಿಯೊಬ್ಬರ ಮೇಲೆ ಚನ್ನಪಟ್ಟಣ ಪೊಲೀಸ್ ವಸತಿ ಸಮುಚ್ಛಯದ ಆವರಣದಲ್ಲಿ ಹಲ್ಲೆ ಮಾಡಿದ್ದರು. ಈ ವೇಳೆ ಸಹೋದ್ಯೋಗಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಸಿದಂತೆ ಪ್ರಕಾಶ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸ್ವಾಮೀಜಿ ಒಬ್ಬರಿಗೆ ಗನ್ ಮ್ಯಾನ್ ಆಗಿ ಅವಿನಾಶ್ ಅವರನ್ನು ನೇಮಿಸಲಾಗಿತ್ತು. ಈ ವೇಳೆ ಅವಿನಾಶ್ ಸ್ವಾಮೀಜಿ ಅವರ ಖಾಸಗಿ ವಿಡಿಯೊವನ್ನು ಚಿತ್ರೀಕರಿಸಿಕೊಂಡು ಅದನ್ನು ತೋರಿಸಿ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಅವಿನಾಶ್ ಪದೇ ಪದೇ ಸ್ವಾಮೀಜಿಗೆ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದರು. ಇದರಿಂದ ಬೇಸತ್ತ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅವಿನಾಶ್ ಸಹ ಸುಲಿಗೆ ಪ್ರಕರಣದಲ್ಲಿ ಭಾಗಿ ಆಗಿರುವುದು ಇಲಾಖಾ ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವಿನಾಶ್ ನನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು