ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದ ಪ್ರಯೋಜನವೇನು: ವಾಟಾಳ್‌ ಪ್ರಶ್ನೆ

Last Updated 5 ಫೆಬ್ರುವರಿ 2020, 16:03 IST
ಅಕ್ಷರ ಗಾತ್ರ

ರಾಮನಗರ: ವರ್ಷಕ್ಕೊಂದು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಆದರೆ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಈಡೇರುತ್ತಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ಷೇಪಿಸಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಬುಧವಾರ ಬೆಂಗಳೂರು–ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ಸಂದರ್ಭ ಅವರು ಮಾತನಾಡಿದರು. ‘ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆ ಇದೆಯೇ’ ಎಂದು ಪ್ರಶ್ನಿಸಿದ ಅವರು ‘ಮುಖ್ಯಮಂತ್ರಿಗಳು, ಸಾಹಿತಿಗಳು ಭಾಷಣ ಮಾಡುತ್ತಾರೆ, ಹೋಗುತ್ತಾರೆ. ಇಂತಹ ಭಾಷಣಗಳಿಂದ ಪ್ರಯೋಜನವಿಲ್ಲ. ಈಗ ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಿಂದ ಆಗುವ ಅನುಕೂಲವೇನು, ನಾನು ಸಮ್ಮೇಳನದ ವಿರೋಧಿಯಲ್ಲ, ಆದರೆ ವಾಸ್ತವ ಸಂಗತಿ ಹೇಳುತ್ತಿದ್ದೇನೆ’ ಎಂದರು.

ಕರ್ನಾಟಕದಲ್ಲಿ ಎರಡು ಕೋಟಿ ಜನರು ವಲಸಿಗರಾಗಿದ್ದಾರೆ. ಉತ್ತರ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಬೆಂಗಳೂರು ಪರಭಾಷಿಗರ ಕೈಯಲ್ಲಿದೆ. ಬೆಳಗಾವಿಯಲ್ಲಿ ಶಿವಸೇನೆ, ಎಂಇಎಸ್ ನವರು ದಾಂದಲೆ ನಡೆಸುತ್ತಿದ್ದಾರೆ. ಬಿಡದಿ ಕೈಗಾರಿಕೆಗಳಲ್ಲಿಯೂ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂದರು.

ರಾಜ್ಯದ ಶಾಸಕರು, ಸಂಸದರು, ಸಚಿವರಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ. ಮೇಕೆದಾಟು, ಮಹಾದಾಯಿ ಯೋಜನೆ ಈವರೆಗೆ ಗೆಜೆಟ್ ನಲ್ಲಿ ಪ್ರಕಟವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಸಮ್ಮೇಳನ ಮೌಲ್ಯ ಕಳೆದುಕೊಂಡಿದೆ. ಸಾಹಿತಿಗಳು, ಚುನಾಯಿತ ಪ್ರತಿನಿಧಿಗಳು ಸಮ್ಮೇಳನದಲ್ಲಿ ದೋಸೆ, ಕಿಚಡಿ ತಿಂದು ಬರುವ ಬದಲು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಐದು ತಿಂಗಳಿಂದ ಸಚಿವ ಸಂಪುಟವನ್ನು ವಿಸ್ತರಿಸುವ ಪ್ರಹಸನ ನಡೆಯುತ್ತಿದೆಯೇ ಹೊರೆತು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ತಿಳಿಸಿದರು.

ಕರುನಾಡ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್, ಪದಾಧಿಕಾರಿಗಳಾದ ಎಚ್.ಆರ್. ಪಾರ್ಥಸಾರಥಿ, ನಾರಾಯಣಸ್ವಾಮಿ, ಗಾಯಿತ್ರಿ ಬಾಯಿ, ಜಯರಾಮು, ಮರಿಸ್ವಾಮಿ, ನಾಗು, ನಿರ್ಮಲಾ, ಸಿ.ಎಸ್. ಜಯಕುಮಾರ್, ಅಖಿಲೇಶ್, ವಸಂತ್, ಎನ್.ವಿ. ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT