ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ’

ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಚಿವ ಅಶ್ವತ್ಥ ನಾರಾಯಣ ವಿಡಿಯೊ ಕಾನ್ಫರೆನ್ಸ್‌
Last Updated 16 ಜುಲೈ 2020, 17:13 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್-19 ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಕಂದಾಯ ಭವನವನ್ನು ಮುಂದಿನ ದಿನಗಳಲ್ಲಿ ವಿಸ್ತರಿತ ಆಸ್ಪತ್ರೆಯಾಗಿ ಮುಂದುವರೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಜಿಲ್ಲಾಡಳಿತಕ್ಕೆ ಸೂಚಿಸಿದರು.

ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತಂತೆ ಗುರುವಾರ ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಈಗಿರುವ ಕೋವಿಡ್-19 ಆಸ್ಪತ್ರೆಯನ್ನು 300 ಹಾಸಿಗೆಗಳ ಸುಸಜ್ಜಿತ ವಿಸ್ತರಿತ ಆಸ್ಪತ್ರೆಯಾಗಿ ಮಾರ್ಪಡಿಸಲು ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು. ವಿಸ್ತರಿತ ಆಸ್ಪತ್ರೆಯಲ್ಲಿ ತುರ್ತು ನಿರ್ವಹಣಾ ಕೇಂದ್ರ, ಅಪಘಾತ ಚಿಕಿತ್ಸೆ ವಿಭಾಗ, ಟ್ರಾಮ, ಕ್ಯಾನ್ಸರ್ ಸೇರಿದಂತೆ ಪ್ರಮುಖ ರೋಗಗಳಿಗೆ ಚಿಕಿತ್ಸೆ ನೀಡಲು ಸಜ್ಜುಗೊಳಿಸುವಂತೆ ಸಲಹೆ ನೀಡಿದರು.

ಹುದ್ದೆ ಭರ್ತಿ: ಪ್ರಸಕ್ತ ರಾಮನಗರ ಜಿಲ್ಲೆಯಲ್ಲಿ ಅವಶ್ಯಕತೆ ಇರುವ 18 ವೈದ್ಯರು, 30 ಶುಶ್ರೂಷಕಿಯರು, 26 ಡಿ ಗ್ರೂಪ್ ಮತ್ತು 14 ಪ್ರಯೋಗಾಲಯ ಪರೀಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸಚಿವರು ಸೂಚಿಸಿದರು.

ಕ್ಷಿಪ್ರ ಪರೀಕ್ಷೆ: ಜಿಲ್ಲೆಯಲ್ಲಿ ಕೋವಿಡ್-19 ಅನ್ನು ನಿಯಂತ್ರಿಸಲು ಅನುವಾಗುವಂತೆ ಸ್ಯಾಂಪಲ್ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಿದ ಅವರು, ಪ್ರತಿ ದಿನವೂ 200ಕ್ಕೂ ಹೆಚ್ಚು ಟ್ರೂನೆಟ್ ಮತ್ತು ಆ್ಯಂಟಿಜೆನ್ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸುವಂತೆ ತಿಳಿಸಿದರು.

ಆರ್‌ಟಿ-ಪಿಸಿಆರ್ ಪರೀಕ್ಷೆ: ಉದ್ಘಾಟಿಸಬೇಕಾಗಿರುವ ಹೊಸ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕೇಂದ್ರವನ್ನು ಅಗತ್ಯ ಸಿಬ್ಬಂದಿಯೊಂದಿಗೆ ಜುಲೈ ತಿಂಗಳ ಅಂತ್ಯಕ್ಕೆ ಆರಂಭಿಸಬೇಕು. ಇದಕ್ಕೆ ಬೇಕಾಗಿರುವ ನೆರವನ್ನು ಕೊಪ್ಪಳದಲ್ಲಿರುವ ಕೇಂದ್ರದೊಂದಿಗೆ ಪಡೆದುಕೊಳ್ಳುವಂತೆ ತಿಳಿಸಿದರು. ಹಾಗೆಯೇ, ಆಸ್ಪತ್ರೆಯಲ್ಲಿರುವ ಈ ಕೇಂದ್ರದ ನಿರ್ವಹಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯವರು ಮಾಹಿತಿ ನೀಡಲಿದ್ದಾರೆ ಎಂದರು.

ಸಚಿವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT