ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕದ ಗಡಿ ದಾಟಿದ ಬೀನ್ಸ್‌

ತರಕಾರಿ ಬೆಲೆ ಇನ್ನಷ್ಟು ತುಟ್ಟಿ: ಗ್ರಾಹಕ ಕಂಗಾಲು
Last Updated 9 ಮೇ 2019, 9:05 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆಯಲ್ಲಿ ಬಹುತೇಕ ತರಕಾರಿಗಳು ತುಟ್ಟಿಯಾಗಿದ್ದು, ಬೀನ್ಸ್‌ ಅರ್ಥಾತ್‌ ಹುರುಳಿಕಾಯಿ ಬೆಲೆ ಶತಕದ ಗಡಿ ದಾಟಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ಸಾಕಷ್ಟು ತರಕಾರಿಗಳ ಬೆಲೆ ದುಪ್ಪಟ್ಟಾಗಿ ಹೋಗಿದೆ. ದಿನಬಳಕೆಯ ಕಾಯಿಪಲ್ಲೆ ಬೆಲೆ ಗಗನಮುಖಿಯಾದ ಪರಿಣಾಮ ಗ್ರಾಹಕರ ಕಿಸೆ ಬಲು ಬೇಗನೆ ಖಾಲಿಯಾಗುತ್ತಿದೆ. ಕೆಲವು ವಾರಗಳ ನಂತರ ಬೆಲೆ ಇಳಿಯಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದ ಜನಸಾಮಾನ್ಯರು ತರಕಾರಿ ಬೆಲೆ ಕೇಳಿಯೇ ಹೌಹಾರುತ್ತಿದ್ದಾರೆ.

ಗರಿಷ್ಠ ಬೆಲೆ ಹೊಂದಿರುವ ಕೀರ್ತಿ ಬೀನ್ಸ್‌ನದ್ದು. ವಾರಗಳ ಹಿಂದೆ ₨80 ಕ್ಕೆ ಸಿಗುತ್ತಿದ್ದ ಈ ತರಕಾರಿ ಈಗ ಅದರ ಜೊತೆ ಇನ್ನಷ್ಟು ತುಟ್ಟಿಯಾಗಿದೆ. ಮದುವೆ ಸೀಜನ್‌್ ಆದ ಕಾರಣ ಇದಕ್ಕೆ ಬೇಡಿಕೆ ಇದ್ದೇ ಇದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಆವಕವಾಗುತ್ತಿದ್ದು , ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆ. ಬೀನ್ಸ್‌ ನಂತರದಲ್ಲಿ ನುಗ್ಗೆಕಾಯಿ ಸಹ ದುಬಾರಿಯ ಪಟ್ಟಿಯಲ್ಲಿ ಇದೆ. ಇದಕ್ಕೂ ಮದುವೆಯ ಸುಗ್ಗಿ ಕಾಲದಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಸದ್ಯಕ್ಕೆ ಈ ಎರಡೂ ತರಕಾರಿಗಳ ಬೆಲೆ ಇಳಿಯುವ ಲಕ್ಷಣಗಳು ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲ.

ಈರೇಕಾಯಿ, ಹಾಗಲಕಾಯಿ, ದಪ್ಪ ಮೆಣಸಿನಕಾಯಿಗಳು ಸದ್ಯ ಏರುಗತಿಯಲ್ಲಿ ಇವೆ. ಮಾರುಕಟ್ಟೆಯಲ್ಲಿ ಇವುಗಳ ಆವಕ ಕಡಿಮೆ ಇದೆ. ಹಸಿ ಬಟಾಣಿ ಕಾಯಿ ಕೂಡ ದುಬಾರಿಯಾಗಿಯೇ ಉಳಿದಿದೆ. ಬದನೆ, ಬೆಂಡೆ ಕೊಂಚ ಬೆಲೆ ಏರಿಸಿಕೊಂಡಿದೆ.

ಟೊಮ್ಯಾಟೊ ಯಥಾಸ್ಥಿತಿ: ಕಳೆದೊಂದು ತಿಂಗಳಿನಿಂದ ಗಗನಮುಖಿಯಾಗುತ್ತಿದ್ದ ಟೊಮ್ಯಾಟೊ ಬೆಲೆ ಸದ್ಯ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಏರಿಕೆಯೂ ಆಗಿಲ್ಲ. ಉಳಿಯುತ್ತಲೂ ಇಲ್ಲ. ಇನ್ನೆರಡು ವಾರದ ಬಳಿಕ ಇದರ ಬೆಲೆ ಇಳಿಕೆಯ ನಿರೀಕ್ಷೆ ಇದೆ. ಈರುಳ್ಳಿ ಮಾತ್ರ ಕಳೆದ ಆರೇಳು ತಿಂಗಳಿಂದಲೂ ಬೆಲೆಯಲ್ಲಿ ಸ್ಥಿರತೆ ಕಾಯ್ಡುಕೊಳ್ಳುತ್ತಾ ಬಂದಿದೆ. ಗ್ರಾಹಕರನ್ನು ಹೆಚ್ಚು ಕಣ್ಣೀರು ಹಾಕಿಸುತ್ತಿಲ್ಲ.
ನಿಂಬೆಗೆ ತಗ್ಗಿದ ಬೇಡಿಕೆ

ಸದ್ಯ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ವಾತಾವರಣ ತಂಪಾಗುತ್ತಿರುವ ಕಾರಣ ನಿಂಬೆ ಹಣ್ಣು ಬೇಡಿಕೆ ಕೊಂಚ ಕಡಿಮೆ ಆಗಿದೆ. ಪ್ರತಿ ಹಣ್ಣಿಗೆ ₨1 ರಷ್ಟು ಕಡಿಮೆಯಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ನಿಂಬೆ ₨3 ಕ್ಕೆ ಸಿಕ್ಕರೆ, ದಪ್ಪ ಗಾತ್ರದ ಕಾಯಿ ₨5ಕ್ಕೆ ಮಾರಾಟ ಆಗುತ್ತಿದೆ.

ರಾಮನವಮಿಯ ಬಳಿಕ ಸೌತೆಕಾಯಿಗೂ ಬೇಡಿಕೆ ಕೊಂಚ ತಗ್ಗಿದೆ. ಹೀಗಾಗಿ ಒಂದಕ್ಕೆ ₨10ಕ್ಕೆ ಬೆಲೆ ಏರಿಸಿಕೊಂಡಿದ್ದ ಸೌತೆ ಈಗ ₨8ಕ್ಕೆ ಸಿಗುತ್ತಿದೆ. ಮಾರುಕಟ್ಟೆಗೆ ಕೇರಳ, ಆಂಧ್ರ ಭಾಗದ ಕಲ್ಲಂಗಡಿ ಪೂರೈಕೆ ಹೆಚ್ಚಾದ ಕಾರಣ ಪ್ರತಿ ಕೆ.ಜಿ.ಗೆ ₨15ಕ್ಕೆ ಕುಸಿದಿದೆ. ಖರ್ಜೂಜ ಹಣ್ಣಿನ ಆವಕ ಕಡಿಮೆ ಇದ್ದು, ಕೆ.ಜಿ.ಗೆ ₨ 30–40 ರ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಸೊಪ್ಪಿನ ಬೆಲೆಯೂ ತುಟ್ಟಿ
ಸೊಪ್ಪುಗಳ ಮಾರಾಟ ದರದಲ್ಲಿಯೂ ಏರಿಕೆಯಾಗುತ್ತಿದೆ. ಫಾರ್ಮ್‌ ಮಾದರಿಯ ಕೊತ್ತಂಬರಿ ಕಟ್ಟಿನ ಬೆಲೆ ₨20 ಇದ್ದರೆ, ನಾಟಿ ತಳಿ ₨30ಕ್ಕೆ ಜಿಗಿದಿದೆ. ದಂಟು, ಕೀರೆ, ಬಸಳೆ, ಸಬ್ಬಸಿಗೆ ಒಂದು ಕಂತೆಗೆ ₨10 ಇದೆ. ಮೆಂತ್ಯ ಕೊಂಚ ದುಬಾರಿ ಆಗಿದ್ದು, ₨15–20ಕ್ಕೆ ಒಂದು ಕಟ್ಟು ಸಿಗುತ್ತಿದೆ. ಪಾಲಕ್‌, ಪುದೀನ ಕಂತೆ ₨5–10ಕ್ಕೆ ಸಿಗುತ್ತಿದೆ. ಜೋರು ಮಳೆಯಾದಲ್ಲಿ ಸೊಪ್ಪು ಕೊಳೆಯುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಇವುಗಳ ಧಾರಣೆಯಲ್ಲಿಯೂ ಏರಿಳಿತವಾಗುವ ಸಾಧ್ಯತೆ ಇದೆ.

ತರಕಾರಿ ದರ (ಚಿಲ್ಲರೆ ಮಾರುಕಟ್ಟೆ–ಪ್ರತಿ ಕೆ.ಜಿಗೆ ₹ಗಳಲ್ಲಿ)

ಬೀನ್ಸ್‌: 90–100
ಈರೇಕಾಯಿ: 60
ಮೂಲಂಗಿ: 30–40
ಕ್ಯಾರೆಟ್: 50
ನವಿಲುಕೋಸು: 50
ಎಲೆಕೋಸು: 30
ಹಸಿ ಮೆಣಸಿನಕಾಯಿ: 60
ಬದನೆಕಾಯಿ: 35–40
ಟೊಮ್ಯಾಟೊ: 40
ಹಾಗಲಕಾಯಿ: 60
ಬೆಂಡೆ: 35–40
ಸೌತೆಕಾಯಿ (ಒಂದಕ್ಕೆ): ₨8
ಬೆಳ್ಳುಳ್ಳಿ: 100–120
ಶುಂಠಿ: 80
ಹಸಿ ಬಟಾಣಿ: 80
ಈರುಳ್ಳಿ: 20
ಆಲೂಗಡ್ಡೆ: 25
ಬೀಟ್‌ರೂಟ್‌: 30
ದಪ್ಪ ಮೆಣಸಿನಕಾಯಿ: 50–60

***
ಮಾರುಕಟ್ಟೆಗೆ ತರಕಾರಿ ಬರುವುದು ಕಡಿಮೆ ಆಗಿರುವ ಕಾರಣ ಬೆಲೆ ಏರಿಕೆಯಾಗಿದೆ. ಇನ್ನೆರಡು ವಾರ ಇದೇ ಪರಿಸ್ಥಿತಿ ಇರಲಿದೆ
– ಗೋಪಾಲ್‌, ವರ್ತಕ

ಬೀನ್ಸ್ ಬೆಲೆ ಕೇಳಿದರೇ ಬೆಚ್ಚಿ ಬೀಳುವಂತಿದೆ. ಟೊಮ್ಯಾಟೊ ಕೂಡ ಕಡಿಮೆ ಆಗಿಲ್ಲ. ಯಾವೊಂದು ತರಕಾರಿಯೂ ಕೈಗೆಟಕುವ ದರದಲ್ಲಿ ಇಲ್ಲ
– ಸುಧಾ, ಗ್ರಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT