ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಪರಿಷತ್ ಅಭ್ಯರ್ಥಿ ರಾಮೋಜಿಗೌಡ ಮತಯಾಚನೆ

ಶಾಲಾ ಶಿಕ್ಷಕರ ಭೇಟಿ: ಸಾಥ್ ನೀಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ
Published 23 ಮೇ 2024, 4:42 IST
Last Updated 23 ಮೇ 2024, 4:42 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರು, ನಗರದಲ್ಲಿ ಮಂಗಳವಾರ ಶಾಂತಿನಿಕೇತನ ಶಾಲೆ ಸೇರಿದಂತೆ ಕೆಲವೆಡೆ ಪ್ರಚಾರ ನಡೆಸಿ ಮತ ಯಾಚಿಸಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರಿಗೆ ಸಾಥ್ ನೀಡಿದರು.

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸೌಮ್ಯ ಕುಮಾರಸ್ವಾಮಿ ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚಿಸಿ ಮಾತನಾಡಿದ ಅವರು, ‘ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ ನಾನು, ಅಂದಿನಿಂದಲೂ ಶಿಕ್ಷಕರು ಹಾಗೂ ಪದವೀಧರರ ಪರವಾಗಿ ದನಿ ಎತ್ತುತ್ತಾ ಬಂದಿದ್ದೇನೆ. ಅವರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಾ ಬಂದಿದ್ದೇನೆ. ಚುನಾವಣೆಯಲ್ಲಿ ಎರಡು ಸಲ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದೇನೆ’ ಎಂದರು.

‘ಪದವೀಧರರ ಕುರಿತು ನನ್ನ ಹೋರಾಟದ ಬದ್ಧತೆ ಗಮನಿಸಿರುವ ಕಾಂಗ್ರೆಸ್ ಮತ್ತೊಮ್ಮೆ ಅವಕಾಶ ನೀಡಿದೆ. ಪುಟ್ಟಣ್ಣ ಅವರು ಜೊತೆಯಲ್ಲಿರುವುದು ನನಗೆ ದೊಡ್ಡ ಶಕ್ತಿ ಬಂದಂತಾಗಿದೆ. ಕ್ಷೇತ್ರವು 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲರೂ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ‘ಕ್ಷೇತ್ರವನ್ನು ಹಿಂದಿನಿಂದ ಪ್ರತಿನಿಧಿಸುತ್ತಾ ಬಂದಿರುವವರು ಪದವೀಧರರ ಪರವಾಗಿ ಯಾವುದೇ ಕೆಲಸ ಮಾಡಿಲ್ಲ. ಅವರ ಸಮಸ್ಯೆಗಳ ಕುರಿತು ದನಿ ಎತ್ತಿಲ್ಲ. ಈ ಸಲ ಅವರನ್ನು ಮನೆಗೆ ಕಳಿಸಿ, ಪದವೀಧರರ ಹಿತ ಕಾಯುವವರನ್ನು ವಿಧಾನಸೌಧಕ್ಕೆ ಕಳಿಸಬೇಕು. ಅದಕ್ಕಾಗಿ, ಶಿಕ್ಷಕರು ಕೈ ಜೋಡಿಸಬೇಕು’ ಎಂದು ಹೇಳಿದರು.

‘ರಾಮೋಜಿಗೌಡ ಅವರು ಎರಡು ಸಲ ಸೋತರು, ಕ್ಷೇತ್ರದಲ್ಲಿ ಓಡಾಡುತ್ತಾ ಪದವೀಧರರ ದನಿಯಾಗಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಮೇಳ, ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಸೇರಿದಂತೆ ಪದವೀಧರರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪದವೀಧರರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಂತಹವರನ್ನು ಗೆಲ್ಲಿಸಬೇಕು. ನಾನು ಸೇರಿದಂತೆ ಇಡೀ ಸರ್ಕಾರ ಅವರ ಬೆನ್ನಿಗಿದೆ’ ಎಂದರು.

ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಸಂಯೋಜಕ ನಾರಾಯಣ್ ಟಿ.ವಿ ಹಾಗೂ ಶಿಕ್ಷಕರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT