ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆಯಿಂದ ನೀರಿನ ಮಾದರಿ ಪರೀಕ್ಷೆ: ಶುದ್ಧ ನೀರು ಘಟಕವೇ ಅಶುದ್ಧ!

Last Updated 14 ಮೇ 2019, 13:29 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆಯಲ್ಲಿ ಜನರ ದಾಹ ನೀಗಿಸುತ್ತಿರುವ ಶುದ್ಧ ನೀರು ಘಟಕಗಳೇ ಅಶುದ್ಧವಾಗಿವೆ!

ಸರ್ಕಾರದ ಇಲಾಖೆಗಳು ನಡೆಸಿದ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಇಂತಹದ್ದೊಂದು ಅಂಶವು ಬೆಳಕಿಗೆ ಬಂದಿದೆ. ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ಜನವರಿಯಿಂದ ಏಪ್ರಿಲ್‌ವರೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಎರಡು ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ 111 ಮಾದರಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇನ್ನೂ 109 ವರದಿಗಳು ಕೈ ಸೇರಬೇಕಿದ್ದು, ಇವುಗಳಲ್ಲಿನ ನೀರು ಸಹ ಅಶುದ್ಧಗೊಂಡಿರುವ ಸಾಧ್ಯತೆ ಇದೆ.

ನಕಾರಾತ್ಮಕ ವರದಿ ಬಂದ ಘಟಕಗಳ ಪೈಕಿ 109 ಘಟಕಗಳಿಗೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, 89 ಘಟಕಗಳಿಗೆ ಕ್ಲೋರಿನೇಷನ್ ನಡೆಸಲಾಗಿದೆ. ತಿಂಗಳಿಗೆ ಎರಡು ಬಾರಿ ನೀರಿನ ಗುಣಮಟ್ಟ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಜತೆಗೆ ಆರೋಗ್ಯ ನಿರೀಕ್ಷಕರ ಮೂಲಕವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲ ಟ್ಯಾಂಕ್‌ಗಳ ಪರಿಶೀಲನೆ ಜತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಲಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಎಲ್ಲೆಲ್ಲಿ ಎಷ್ಟೆಷ್ಟು

ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಟ್ಟು 134 ಮಾದರಿಗಳ ಪರೀಕ್ಷೆ ನಡೆದಿದ್ದು, ಇದರಲ್ಲಿ 93 ಮಾದರಿಗಳು ಮಾತ್ರ ಕುಡಿಯಲು ಅರ್ಹವಾಗಿವೆ. ಕನಕಪುರ ತಾಲ್ಲೂಕಿನಲ್ಲಿ 106 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 67 ನೀರಿನ ಮಾದರಿಗಳು ಬಳಕೆಗೆ ಯೋಗ್ಯವಾಗಿವೆ. ಮಾಗಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 201 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 123 ಮಾದರಿಗಳಲ್ಲಿನ ನೀರು ಬಳಸಲು ಯೋಗ್ಯವಾಗಿದೆ. ರಾಮನಗರ ತಾಲ್ಲೂಕಿನಲ್ಲಿ 147 ಮಾದರಿಗಳ ಪೈಕಿ 85 ಮಾದರಿಗಳ ನೀರು ಶುದ್ಧವಾಗಿದೆ ಎಂದು ಪ್ರಯೋಗಾಲಯದ ವರದಿಯು ತಿಳಿಸಿದೆ.

ಅಂಕಿ–ಅಂಶ
471–ಗ್ರಾಮಗಳಲ್ಲಿನ ನೀರಿನ ಮಾದರಿ ಪರೀಕ್ಷೆ
588–ನೀರಿನ ಮಾದರಿಗಳ ಪರೀಕ್ಷೆ
368–ಕುಡಿಯಲು ಯೋಗ್ಯವಾದ ಮಾದರಿಗಳು
111–ತಿರಸ್ಕೃತಗೊಂಡ ಮಾದರಿಗಳು

* ಪ್ರತಿ ಆರೋಗ್ಯ ಕೇಂದ್ರದಿಂದ ಎರಡು ನೀರಿನ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ತಿರಸ್ಕೃತಗೊಂಡ ಘಟಕಗಳಲ್ಲಿ ಕ್ಲೋರಿನೇಷನ್‌ಗೆ ಸೂಚನೆ ನೀಡಲಾಗಿದೆ
-ಟಿ. ಅಮರ್‌ನಾಥ್‌,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT