ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಶುದ್ಧೀಕರಣ ಘಟಕ ದುಸ್ಥಿತಿಗೆ

ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯ ಆರೋಪ
Last Updated 17 ಜುಲೈ 2018, 16:21 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣಕ್ಕೆ ಕುಡಿಯುವ ಶುದ್ಧ ನೀರು ಸರಬರಾಜು ಯೋಜನೆ ಶುದ್ಧೀಕರಣ ಘಟಕ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿದೆ ಎಂದು ಹಿರಿಯರಾದ ಅನಂತಕೃಷ್ಣಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪೇಟೆ ನಿವಾಸಿಗಳು ಕುಡಿಯುವ ನೀರಿಗಾಗಿ ಪ್ರತಿಯೊಂದು ಮನೆಯ ಒಳಗೆ ಬಾವಿ ಇತ್ತು. ಜೊತೆಗೆ ಗೌರಮ್ಮನ ಕೆರೆ ಮತ್ತು ಹೊಂಬಾಳಮ್ಮನಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದರು ಎಂದು ವೃದ್ಧರಾದ ಚಿಕ್ಕಣ್ಣ ಸ್ಮರಿಸಿದರು.

ತಿರುಮಲೆ ರಸ್ತೆಯ ಅಕ್ಕಪಕ್ಕದಲ್ಲಿದ್ದ ನೂರಾರು ಕಲ್ಯಾಣಿಗಳಲ್ಲಿ ತೆಂಗಿನ ಎಳೆ ನೀರಿನಂತಹ ಸಿಹಿನೀರು ಲಭ್ಯವಿತ್ತು ಎಂದು ಹಿರಿಯರಾದ ಸಿದ್ದಲಿಂಗಯ್ಯ ತಿಳಿಸಿದರು.

1965ರ ಜೂನ್‌ 24ರಂದು ಮೈಸೂರು ಶಾಸನಸಭೆಯ ಅಧ್ಯಕ್ಷ ಬಿ.ವೈಕುಂಠ ಬಾಳಿಗಾ ಅಧ್ಯಕ್ಷತೆಯಲ್ಲಿ ಅಂದಿನ ಪಂಚಾಯತ್‌ ರಾಜ್‌ ಮತ್ತು ಪೌರಾಡಳಿತ ಸಚಿವ ಆರ್‌.ಎಂ.ಪಾಟೀಲ್‌ ಅವರು ಗೌರಮ್ಮನಕೆರೆ ಜೌಗುಪ್ರದೇಶಕ್ಕೆ ಸೇರಿರುವ ತಿರುಮಲೆ ರಸ್ತೆ ತಗ್ಗಿನಲ್ಲಿ ಕೆಂಪೇಗೌಡ ನೀರು ಸರಬರಾಜು ಯೋಜನೆಯಡಿ ಕಟ್ಟಿಸಿದ್ದ ಪಂಪ್‌ ಹೌಸ್‌ ಉದ್ಘಾಟಿಸಿದ್ದರು.

ಎರಡು ಆಳವಾದ ಬಾವಿಗಳಿಗೆ ವಿದ್ಯುತ್‌ ಮೋಟಾರ್‌ ಬಳಸಿ, ನೀರು ಮೇಲೆತ್ತಿ ಶುದ್ದೀಕರಿಸಿ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಾರಂಭಗೊಂಡಿತು. ಅಂದು ಕಟ್ಟಿಸಿದ್ದ ಕಲ್ಲಿನ ಕಟ್ಟಡ ಇಂದಿಗೂ ಸುಭದ್ರವಾಗಿದೆ. ಆದರೆ, ಮಾಳಿಗೆಯ ಮೇಲೆ ಗಿಡಗಂಟಿ ಬೆಳೆದಿದೆ. ಪಂಪ್‌ ಹೌಸ್‌ ದುರಸ್ತಿ ಪಡಿಸಿದ್ದರೆ ಇನ್ನು ಕೆಲ ವರ್ಷ ನೀರು ಸರಬರಾಜಿಗೆ ಬಳಸಬಹುದಿತ್ತು. ಆದರೆ, ಬಹುಕೋಟಿ ವೆಚ್ಚದಲ್ಲಿ ಮಂಚನಬೆಲೆ ಜಲಾಶಯದ ನೀರು ಪಟ್ಟಣಕ್ಕೆ ಹರಿದು ಬಂದ ಮೇಲೆ ಕೆಂಪೇಗೌಡ ನೀರು ಸರಬರಾಜು ಯೋಜನೆ ಪಂಪ್‌ ಹೌಸ್‌ ವ್ಯವಸ್ಥೆ ಬಗ್ಗೆ ಗಮನಿಸದೆ ಕೈಬಿಡಲಾಗಿದೆ ಎಂದರು.

ದುರಸ್ತಿ ಮಾಡಿಸಲು ಪುರಸಭೆ ನಿಧಿಯಲ್ಲಿ ಹಣವಿಲ್ಲ. ಅಂಗಡಿ ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರು ಮೂರನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆಗೆ ನೀಡಿದ್ದಾರೆ. ಪುರಸಭೆಗೆ ಮಾತ್ರ ತಿಂಗಳ ಬಾಡಿಗೆ ಕಟ್ಟುತ್ತಿಲ್ಲ. ಕ್ರಮಕ್ಕೆ ಮುಂದಾದರೆ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಾರೆ. ಹಣ ಇಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಕೆ.ಯು.ಕೊಟ್ಟು ಕತ್ತಿರ ಮುತ್ತಪ್ಪ.

ಪುರಸಭೆಯಲ್ಲಿ ವಿವಿಧ ಯೋಜನೆಗಳ ನಿಧಿಯಲ್ಲಿ ಹಲವು ಕೋಟಿ ಹಣ ಇದೆ. ಕಾಮಗಾರಿ ಅನುಷ್ಠಾನಗೊಳಿಸಲು ಎಂಜಿನಿಯರ್‌ಗಳ ಕೊರತೆ ಇದೆ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT