ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನಟರು ರಾಜಕಾರಣಕ್ಕೆ ಲಾಯಕ್ಕಲ್ಲ; ‘ಮೈತ್ರಿ’ಗೆ 16 ಸ್ಥಾನ: ಹೊರಟ್ಟಿ

ಸುಮಲತಾ, ದರ್ಶನ್‌ ಬಗ್ಗೆ ಪರೋಕ್ಷ ಟೀಕೆ
Last Updated 25 ಮಾರ್ಚ್ 2019, 11:23 IST
ಅಕ್ಷರ ಗಾತ್ರ

ರಾಮನಗರ: ‘ಕಾಂಗ್ರೆಸ್‌–ಜೆಡಿಎಸ್ ಮೈತ್ರಿಕೂಟವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 15–16 ಸ್ಥಾನ ಗೆಲ್ಲುವುದು ನಿಶ್ಚಿತ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದ ಜನತೆ ಹಾಗೂ ಅಭಿವೃದ್ಧಿಯ ಹಿತದೃಷ್ಟಿಯಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ತಳಮಟ್ಟದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಈಗ ಶೇ 80ರಷ್ಟು ಭಿನ್ನಾಭಿಪ್ರಾಯಗಳು ಬಗೆಹರಿದಿವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಿನಿಮಾ ನಟರು ನಾಲಾಯಕ್ಕು

‘ಸಿನಿಮಾ ನಟರು ಕೇವಲ ಪ್ರಚಾರ ಮಾಡಿ ಹೋಗುವುದಕ್ಕೆ ಸೀಮಿತವೇ ಹೊರತು ರಾಜಕಾರಣಕ್ಕಲ್ಲ. ಅವರಿಗೆ ಜನರ ನಾಡಿಮಿಡಿತ ಅರ್ಥವಾಗುವುದಿಲ್ಲ. ನಾವು ಅದರಲ್ಲಿಯೇ ತೊಡಗಿಸಿಕೊಂಡಿರುವವರು’ ಎಂದು ಪರೋಕ್ಷವಾಗಿ ಸುಮಲತಾ ಮತ್ತವರ ಬಳಗಕ್ಕೆ ಟಾಂಗ್‌ ನೀಡಿದರು.

‘ನಟ ದರ್ಶನ್‌ ಮನೆ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆಯೇ ಹೊರತು ಜೆಡಿಎಸ್ ಕಾರ್ಯಕರ್ತರಲ್ಲ. ಅಂದೇ ಅವರ ಮನೆಯ ಸಿಸಿಟಿವಿ ಕ್ಯಾಮೆರಾ ಕೆಟ್ಟು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದರು.

‘ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಸೋಲೊಪ್ಪಿಕೊಂಡಿದೆ. ನೇರವಾಗಿ ಜೆಡಿಎಸ್ ಅನ್ನು ಎದುರಿಸಲು ಶಕ್ತಿ ಇಲ್ಲದವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಮೂಲಕ ಹಿಂಬಾಗಿಲ ರಾಜಕಾರಣ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ನಿಖಿಲ್‌ ಮಂಡ್ಯದ ಜನರೇ ಆರಿಸಿದ ಅಭ್ಯರ್ಥಿ. ಅವರ ಆಯ್ಕೆಗೆ ಸ್ಥಳೀಯರ ವಿರೋಧ ಇದೆ ಎನ್ನುವುದು ಸುಳ್ಳು. ಹಾಗಿದ್ದರೆ ಅಲ್ಲಿನ ಶಾಸಕರು ಮೊದಲೇ ಹೇಳಬಹುದಿತ್ತು’ ಎಂದರು.

ಮೋದಿಗೆ ಸಮ

‘ಪ್ರಾಮಾಣಿಕವಾಗಿ ಹೇಳುವುದಾದರೆ ನಿಖಿಲ್‌ಗೆ ಕುಮಾರಸ್ವಾಮಿಗಿಂತ ಉತ್ತಮ ಭವಿಷ್ಯ ಇದೆ. ನರೇಂದ್ರ ಮೋದಿಯಂತೆಯೇ ಅವರು ಸಹ ಯುವ ಮತದಾರರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ ತೋರುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ವರಿಷ್ಠರೇ ಸುಪ್ರೀಂ ಕೋರ್ಟ್‌

‘ಜೆಡಿಎಸ್ ವರಿಷ್ಠರು ನಮಗೆ ಸುಪ್ರೀಂ ಕೋರ್ಟ್‌ ಇದ್ದ ಹಾಗೆ. ನಾವು ಅವರ ತೀರ್ಮಾನಗಳನ್ನು ಪ್ರಶ್ನಿಸಲು ಆಗದು’ ಎಂದು ಹೊರಟ್ಟಿ ಪ್ರತಿಕ್ರಿಯಿಸಿದರು.

‘ಕ್ಷೇತ್ರ ಹಂಚಿಕೆ ಹಾಗೂ ತುಮಕೂರಿನಿಂದ ಸ್ಪರ್ಧೆ ವಿಚಾರವು ಎಚ್‌.ಡಿ. ದೇವೇಗೌಡರಿಗೆ ಬಿಟ್ಟಿದ್ದು. ಹಾಲಿ ಸಂಸದ ಮುದ್ದ ಹನುಮೇಗೌಡರಿಗೆ ಏಕೆ ಟಿಕೆಟ್‌ ಕೈ ತಪ್ಪಿತೋ ಗೊತ್ತಿಲ್ಲ. ಹೊಂದಾಣಿಕೆಯ ರಾಜಕಾರಣದಲ್ಲಿ ಕೆಲವೊಮ್ಮೆ ಹೀಗಾಗುವುದು ಸಹಜ. ತುಮಕೂರಿನಲ್ಲಿ ಎದ್ದಿರುವ ಬಂಡಾಯ ಶೀಘ್ರ ಶಮನವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನಗೂ ಸಚಿವ ಸ್ಥಾನವನ್ನು ತಪ್ಪಿಸಲಾಯಿತು. ವಿನಾ ಕಾರಣ ಪರಿಷತ್‌ ಸಭಾಪತಿ ಸ್ಥಾನದಿಂದ ಕೆಳಗಿಳಿಸಲಾಯಿತು. ಇಂತಹ ಅನ್ಯಾಯಗಳು ಕೆಲವೊಮ್ಮೆ ಆಗುತ್ತಲೇ ಇರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೇವೇಗೌಡರು ಮೊಮ್ಮಕ್ಕಳನ್ನು ರಾಜಕೀಯಕ್ಕೆ ಕರೆತಂದಿದ್ದನ್ನು ಸಮರ್ಥಿಸಿಕೊಂಡ ಅವರು ‘ಡಾಕ್ಟರ್ ಮಗ ಡಾಕ್ಟರ್‌ ಆಗುವುದಕ್ಕೆ ಅಡ್ಡಿ ಇಲ್ಲ ಎನ್ನುವುದಾದರೆ ರಾಜಕಾರಣಿ ಮಗ ರಾಜಕಾರಣಿ ಆಗುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

* ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರೋಧಿಗಳ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಟೀಕೆಗಳಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಏನನ್ನೋ ಹೇಳಬಾರದು
–ಬಸವರಾಜ ಹೊರಟ್ಟಿ,ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT