ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಎಲ್ಲರಂತೆ ಬದುಕಲು ನಮಗೂ ಸೌಲಭ್ಯ ಕೊಡಿ: ಲಿಂಗತ್ವ ಅಲ್ಪಸಂಖ್ಯಾತರ ಅಳಲು

Published 3 ಜುಲೈ 2024, 14:31 IST
Last Updated 3 ಜುಲೈ 2024, 14:31 IST
ಅಕ್ಷರ ಗಾತ್ರ

ರಾಮನಗರ: ‘ನಮಗೆ ಯಾವುದೇ ಸರ್ಕಾರಿ ಸೌಲಭ್ಯಗಳು ತಲುಪಿಲ್ಲ. ಸಾಲ ಸೌಲಭ್ಯ, ಸ್ವದ್ಯೋಗ ಯೋಜನೆ ಸೌಲಭ್ಯ, ಗೃಹಲಕ್ಷ್ಮಿ ಹಣ ಸೇರಿದಂತೆ ಯಾವ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಸಮಾಜದ ಭಾಗವಾಗಿರುವ ನಮಗೆ ಯಾವ ಸವಲತ್ತುಗಳು ಸಿಗದಿದ್ದರೆ, ಬದುಕು ನಡೆಸುವುದಾದರೂ ಹೇಗೆ...? ’

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಅವರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.

‘ಲಿಂಗತ್ವ ಅಲ್ಪಸಂಖ್ಯಾತರಿಗೆ ₹1,200 ಮಾಸಾಸನ ಜಾರಿಯಾಗಿಲ್ಲ. ಗೃಹಲಕ್ಷ್ಮಿ ಯೋಜನೆಯು ಸಿಗುತ್ತಿಲ್ಲ. ಬಾಡಿಗೆ ಮನೆಯನ್ನು ಯಾರೂ ಕೊಡುತ್ತಿಲ್ಲ. ಅತಂತ್ರ ಸ್ಥಿತಿಯ್ಲಲಿರುವ ಈ ಸಮುದಾಯಕ್ಕೆ ವಸತಿ ವ್ಯವಸ್ಥೆ ಸಿಗಬೇಕು. ಜೊತೆಗೆ ಸರ್ಕಾರಿ ಉದ್ಯೋಗದಲ್ಲಿ ಮೀಲಾತಿ ನೀಡಬೇಕು. ಉದ್ಯೋಗಿನಿ ಯೋಜನೆಯಲ್ಲಿ ಎರಡೆರಡು ಸಲ ಅರ್ಜಿ ಸಲ್ಲಿಸಿದ್ದರೂ ಯೋಜನೆ ಸೌಲಭ್ಯ ಸಿಗುತ್ತಿಲ್ಲ’ ಎಂಬ ದೂರುಗಳು ಬಂದವು.

‘ಲೈಂಗಿಕ ವೃತ್ತಿ ಸ್ವಾಭಿಮಾನದಿಂದ ಬದುಕು ನಡೆಸಿ ಎನ್ನುತ್ತೀರಿ. ಆದರೆ, ಯಾವ ಸೌಲಭ್ಯಗಳನ್ನು ಸಹ ಕೊಡುತ್ತಿಲ್ಲ. ಲಿಂಗತ್ವ ಅಲ್ಪಸಂಖ್ಯಾತರಿಗೆ ಚೇತನ ಯೋಜನೆಯಲ್ಲಿ ಹೆಚ್ಚಿನ ನೆರವು ಸಿಗುತ್ತಿಲ್ಲ. ಹೀಗಾದರೆ, ಈ ಸಮುದಾಯದವರು ಹೇಗೆ ಮುಂದೆ ಬರಲು ಸಾಧ್ಯ. ನಾವೂ ಮನುಷ್ಯರು. ನಮಗೂ ಬೇರೆಯವಂತೆ ಬದುಕಲು ಬೇಕಾದ ಸೌಲಭ್ಯಗಳನ್ನು ಕೊಡಿ. ನಿಗಮದಿಂದಾದರೂ ಸೌಲಭ್ಯಗಳನ್ನು ಒದಗಿಸಿ’ ಎಂದು ಮನವಿ ಮಾಡಿದರು.

ಸ್ತ್ರಿ ಶಕ್ತಿ ಬಲವರ್ಧಿಸಿ: ಸರ್ಕಾರ ಸ್ತ್ರೀ ಶಕ್ತಿ ಸಂಘಗಳನ್ನು ಬಲಪಡಿಸದೆ ಕಡೆಗಣಿಸುತ್ತಿದೆ. ಇದಕ್ಕಾಗಿ, ಸಂಘಗಳು ಆರ್ಥಿಕವಾಗಿ ಮತ್ತಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ಕೆಲ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.

ಅಹವಾಲು ಆಲಿಸಿ ಮಾತನಾಡಿದ ಪದ್ಮಾವತಿ, ‘ಗೃಹಲಕ್ಷ್ಮಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೂ ₹2 ಸಾವಿರ ನೀಡುವುದಕ್ಕೆ ನಾಳೆಯಿಂದಲೇ ಅರ್ಜಿ ಪಡೆಯಲಾಗುವುದು. ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ನಿಗಮದ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಸ್ತ್ರಿ ಶಕ್ತಿ ಸಂಘಗಳ ಬಲವರ್ಧನೆಗೆ ನಿಗಮ ಒತ್ತು ನೀಡಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ದಮನಿತ ಮಹಿಳೆಯರಿಗೆ ಉದ್ಯೋಗಿನಿ ಬದಲಾಗಿ ಕಿರುಸಾಲ ಯೋಜನೆ ಮೂಲಕ ನೇರವಾಗಿ ನಿಗಮದಿಂದ ಸಾಲ ಸೌಲಭ್ಯ ನೀಡುವ ಚಿಂತನೆ ನಡೆಸಲಾಗುತ್ತಿದೆ. ಮಹಿಳೆಯರಿಗೆ ಕಿರುಸಾಲ ನೇರ ಯೋಜನೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಪದ್ಮಾವತಿ ವಿತರಿಸಿದರು. ಮಹಿಳೆಯರು ನಿಗಮದಿಂದ ಸಾಲ ಸೌಲಭ್ಯ ಪಡೆದು ನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಯಪಾಲ್, ಮಹಿಳಾ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಗಾಯಿತ್ರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು, ಆರೋಗ್ಯ ಇಲಾಖೆ ಅಧಿಕಾರಿ ಡಾ. ಕುಮಾರ್, ಶಿಶು ಆಬಿವೃದ್ಧಿ ಯೋಜನಾಧಿಕಾರಿಗಳಾದ ರಾಮನಗರದ ಕಾಂತರಾಜು, ಮಾಗಡಿಯ ಸುರೇಂದ್ರ, ಕನಕಪುರದ ನಾರಾಯಣ್, ಹಾರೋಹಳ್ಳಿಯ ವೇಣುಗೋಪಾಲ್, ಪ್ರತಿಬಿಂಬ ಸಂಸ್ಥೆಯ ಪ್ರಕಾಶ್ ಹಾಗೂ ಇತರರು ಇದ್ದರು.

ನಿಗಮದಲ್ಲಿ ಅನುದಾನ ಕೊರತೆ ಇದೆ. ಈಗಿರುವ ಅನುದಾನ ಯಾವುದಕ್ಕೂ ಸಾಲದು. ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವೆ
– ಪದ್ಮಾವತಿ ಅಧ್ಯಕ್ಷೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT