ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಯಾವಾಗ?

₹1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ: ಬಳಕೆ ಮಾಡದೇ ಮೂಲ ಸೌಕರ್ಯ ಹಾಳು
Last Updated 29 ಏಪ್ರಿಲ್ 2019, 13:57 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರ ರೇವಣಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲೆಂದು ನಿರ್ಮಿಸಲಾದ ಯಾತ್ರಿ ನಿವಾಸದ ಕಾಮಗಾರಿ ಪೂರ್ಣಗೊಂಡು ಎಂಟು ವರ್ಷವಾದರೂ ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿಬಂದಿಲ್ಲ.

ಸುಮಾರು 156 ಅಡಿ ಎತ್ತರದ ಗುಡ್ಡದ ಮೇಲೆ ನೆಲೆಸಿರುವ ರೇವಣಸಿದ್ದೇಶ್ವರ ಮತ್ತು ಗುಡ್ಡದ ಕೆಳಭಾಗದಲ್ಲಿರುವ ಭೀಮೇಶ್ವರ ದೇವರ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ವಾಸ್ತವ್ಯಕ್ಕೆ ಅನುಕೂಲವಾಗಲೆಂದು ಪ್ರವಾಸೋದ್ಯಮ ಇಲಾಖೆಯು 2011ರಲ್ಲಿ ₨1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಿ, 2012ರಲ್ಲೇ ಮುಜರಾಯಿ ಇಲಾಖೆ ವಶಕ್ಕೆ ನೀಡಿದೆ. ತಲಾ ಹತ್ತು ಹಾಸಿಗೆಗಳಿರುವ ಎರಡು ಹಾಲ್, ಎರಡು ಬೆಡ್‌ರೂಮ್‌, ಶೌಚಗೃಹ, ಅಡುಗೆ ಕೋಣೆ ಸೇರಿ ಮೂಲಸೌಕರ್ಯ ಕಲ್ಪಿಸಲಾಗಿದೆ.

ಆದರೆ ಮುಜರಾಯಿ ಇಲಾಖೆ ಅಧಿಕಾರಿಗಳು ಯಾತ್ರಿ ನಿವಾಸವನ್ನು ಲೋಕಾರ್ಪಣೆಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಸರ್ಕಾರಿ ಹಣ ಖರ್ಚಾದರೂ ಪ್ರವಾಸಿಗಳ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಸ್ಥಳೀಯರಾದ ತಮ್ಮಣ್ಣ, ಪುರುಷೋತ್ತಮ್, ಮಹೇಶ್ ಆರೋಪಿಸಿದರು.

ಕಾಮಗಾರಿ ಪೂರ್ಣಗೊಂಡು ಏಳೆಂಟು ವರ್ಷಗಳು ಕಳೆದಿರುವ ಜತೆಗೆ ಕಟ್ಟಡದ ಸಮರ್ಪಕ ನಿರ್ವಹಣೆ ಮಾಡಿಲ್ಲ. ಇದರಿಂದ ಕಟ್ಟಡ ಶಿಥಿಲಾವಸ್ಥೆ ತಲುಪುವ ಸಾಧ್ಯತೆ ಅಧಿಕವಾಗಿದೆ. ಈಗಾಗಲೇ ಕಟ್ಟಡದಲ್ಲಿ ನೀರಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿದ್ಯುತ್ ಬಲ್ಬ್, ಇತರೆ ವಿದ್ಯುತ್ ಪರಿಕರಗಳು ಕೆಟ್ಟು ಹೋಗಿ, ಲೈಟಿಂಗ್ ವ್ಯವಸ್ಥೆ ಹಾಳಾಗಿದೆ. ಇವೆಲ್ಲವನ್ನು ದುರಸ್ತಿ ಮಾಡಿ ಕಟ್ಟಡವನ್ನು ಉದ್ಘಾಟಿಸಬೇಕು ಎಂದು ತಿಳಿಸಿದರು.

ಪ್ರವಾಸಿಗರು ಹೆಚ್ಚಳ: ಶ್ರೀರೇವಣಸಿದ್ದೇಶ್ವರಸ್ವಾಮಿ ಕ್ಷೇತ್ರಕ್ಕೆ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಐದು ಸಾವಿರಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡಿ, ಸ್ವಾಮಿಗೆ ವಿವಿಧ ಪೂಜೆ, ಹರಕೆ ಸಲ್ಲಿಸುತ್ತಾರೆ. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಜಾತ್ರೆ ವಾತಾವರಣ ಕಳೆಗಟ್ಟುವುದರಿಂದ ಸಹಸ್ರಾರು ಭಕ್ತರು ಕ್ಷೇತ್ರದಲ್ಲೇ ಉಳಿದು ವಿಶೇಷ ಪೂಜಾ ಕೈಂಕರ್ಯಗಳ ಸೇವೆಯನ್ನು ಕಣ್ತುಂಬಿಕೊಳ್ಳುತ್ತಾರೆ.

ಅಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಟ್ರಸ್ಟಿನಿಂದ ನಿತ್ಯ ದಾಸೋಹ ಕೂಡ ನಡೆಯುವುದರಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಈಗ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರವಾಸಿಗರು ಈಗಲಾದರೂ ಯಾತ್ರಿ ನಿವಾಸ ಉದ್ಘಾಟನೆಯಾಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳಾಗಿದ್ದರೂ ಉದ್ಘಾಟನೆಯಾಗದಿರುವುದು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ. ಕೂಡಲೇ ಯಾತ್ರಿ ನಿವಾಸ ಉದ್ಘಾಟಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರವಾಸಿಗ ಎಂ. ಕುಮಾರ್ ತಿಳಿಸಿದರು.

ಉದ್ಘಾಟನೆಗೆ ಕ್ರಮ

ಯಾತ್ರಿ ನಿವಾಸದಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆ ಇದೆ. ₨4.7 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸುವ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ, ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಧು ಮುಜರಾಯಿ ಇಲಾಖೆಯ ಇಒ ಮಂಗಳಾ ತಿಳಿಸಿದರು.

*ಎಂಟು ವರ್ಷದ ಹಿಂದೆಯೇ ಕಟ್ಟಡ ನಿರ್ಮಾಣಕ್ಕೆ ಹಣ ವ್ಯಯಿಸಿದ್ದರೂ ಈವರೆಗೆ ಉದ್ಘಾಟನೆ ಆಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ
-ಮಹೇಶ್‌,ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT