ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ರಾಜಕಾರಣ | ಯೋಗೇಶ್ವರ್‌ಗೆ ಸಿಗುತ್ತಾ ವಿಧಾನ ಪರಿಷತ್ ಸ್ಥಾನ?

ಮುನಿಸಿಕೊಂಡ ನಾಯಕನ ಒಲೈಕೆಗೆ ಮುಂದಾಗುತ್ತ ಬಿಜೆಪಿ ಹೈಕಮಾಂಡ್‌: ಕಾರ್ಯಕರ್ತರಲ್ಲಿ ಕುತೂಹಲ
Last Updated 4 ಜೂನ್ 2020, 14:20 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿ ಇರುವ ಬಿಜೆಪಿ ಸ್ಥಳೀಯವಾಗಿ ಪ್ರಬಲವಾಗಿರುವ ಸಿ.ಪಿ. ಯೋಗೇಶ್ವರ್‌ಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸುತ್ತದೆಯೇ?

ಇಂತಹದ್ದೊಂದು ಪ್ರಶ್ನೆ ಸದ್ಯಕ್ಕೆ ಜಿಲ್ಲೆಯ ರಾಜಕಾರಣದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಮುನಿಸಿಕೊಂಡು ಅಜ್ಞಾತವಾಸದಲ್ಲಿ ಇರುವ ಯೋಗೇಶ್ವರ್‌ಗೆ ಅವಕಾಶ ನೀಡುವ ಮೂಲಕ ಅವರನ್ನು ಜಿಲ್ಲೆಯ ರಾಜಕಾರಣದ ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್‍ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದು, ಅವರಿಗೆ ಸಡ್ಡು ಹೊಡೆಯಲು ಸಿಪಿವೈ ಅಗತ್ಯ ಪಕ್ಷಕ್ಕಿದೆ ಎನ್ನುವ ಕಾರಣಕ್ಕೆ ಮತ್ತೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

ಹುಣಸೂರು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ ಯೋಗೇಶ್ವರ್ ನಂತರ ಹಿಂದೆ ಸರಿದಿದ್ದರು. ಇದಾದ ನಂತರ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆಮಾಡಿ ಸಚಿವರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿತ್ತು. ಸಂಪುಟ ವಿಸ್ತರಣೆ ವೇಳೆ ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಸಿಕ್ಕೇಬಿಟ್ಟಿತು ಎಂದು ಅವರ ಬೆಂಬಲಿಗರು ಚನ್ನಪಟ್ಟಣದ ತುಂಬೆಲ್ಲ ಫ್ಲೆಕ್ಸ್‌ಗಳನ್ನು ಹಾಕಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಂತಿಮ ಹಂತದಲ್ಲಿ ಅವರಿಗೆ ಮಂತ್ರಿಸ್ಥಾನ ಕೈ ತಪ್ಪಿತ್ತು. ಇದರಿಂದಾಗಿ ತೀವ್ರವಾಗಿ ಬೇಸರಗೊಂಡಿದ್ದ ಯೋಗೇಶ್ವರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ನಂತರ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಗೊಂಡಿದ್ದು, ಪಕ್ಷದ ಚಟುವಟಿಕೆಗಳಿಂದಲೂ ದೂರ ಉಳಿದಿದ್ದಾರೆ.

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಬಹಿರಂಗವಾಗಿ ಕಾಣಿಸಿಕೊಂಡು ಜನರ ನೆರವಿಗೆ ನಿಂತಿದ್ದರೂ ಯೋಗೇಶ್ವರ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳಲೇ ಇಲ್ಲ. ಜಿಲ್ಲೆ ಮತ್ತು ಕ್ಷೇತ್ರದ ಪಕ್ಷ ಸಂಘಟನೆ ವಿಷಯದಲ್ಲೂ ದೂರವೇ ಉಳಿದು ತಮ್ಮ ಮುನಿಸು ಮುಂದುವರಿಸಿದ್ದಾರೆ.

ಇದೀಗ ವಿಧಾನ ಪರಿಷತ್ ಚುನಾವಣೆ ಕಾವು ಏರತೊಡಗಿದ್ದು ಮತ್ತೆ ಸಿಪಿವೈ ಹೆಸರು ಮುನ್ನಲೆಗೆ ಬಂದಿದೆ. ಯೋಗೇಶ್ವರ್ ಅವರ ಅಭಿಮಾನಿಗಳು ತಮ್ಮ ನಾಯಕನಿಗೆ ಪರಿಷತ್ ಸ್ಥಾನ ನೀಡಬೇಕು ಎನ್ನುವ ಒತ್ತಡವನ್ನು ಹಾಕಿದ್ದಾರೆ. ಅಲ್ಲದೆ, ಆರ್‍ಎಸ್‍ಎಸ್ ಮತ್ತು ಬಿಜೆಪಿ ಕೆಲವು ಮುಖಂಡರೂ ಸಹ ಅವರ ಪರ ಧ್ವನಿ ಎತ್ತಿದ್ದಾರೆ.

ರುದ್ರೇಶ್‌ರಿಂದಲೂ ಬೇಡಿಕೆ: ಇತ್ತ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್ ಸಹ ಪರಿಷತ್‌ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಕಾರಣ ಅವರಿಗೆ ಅವಕಾಶ ಸಿಗಲೂ ಬಹುದು ಎನ್ನುತ್ತಾರೆ ಬಿಜೆಪಿ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT