ಸೋಮವಾರ, ಫೆಬ್ರವರಿ 24, 2020
19 °C
ಸಹ್ಯಾದ್ರಿ ಕಾಲೇಜು ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೇಟಿ ಮಲ್ಲಿಕಾರ್ಜುನ ಕಳವಳ

ಗಾಂಧಿ, ಅಂಬೇಡ್ಕರ್ ಧ್ವೇಷಿಸುವ ಪೀಳಿಗೆ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಆಳುವ ವರ್ಗದ ಒಳ ಹಿತಾಸಕ್ತಿಗಳ ಪರಿಣಾಮ ಸಮಾಜ ಹೊಸ ಸಂಕಷ್ಟ ಎದುರಿಸುವಂತಾಗಿದೆ. ಗಾಂಧಿ, ಅಂಬೇಡ್ಕರ್ ಅವರನ್ನೇ ಧ್ವೇಷಿಸುವ ಪೀಳಿಗೆ ಸೃಷ್ಟಿಯಾಗುತ್ತಿದೆ ಎಂದು ಸಹ್ಯಾದ್ರಿ ಕಾಲೇಜು ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೇಟಿ ಮಲ್ಲಿಕಾರ್ಜುನ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಹವ್ಯಾಸಿ ರಂಗತಂಡಗಳ ಕಲಾವಿದರ ಒಕ್ಕೂಟ ಹಮ್ಮಿಕೊಂಡಿದ್ದ ರಂಗಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಒಟ್ಟಾಗಿ ನಿಲುವುಗಳನ್ನು ಮಂಡಿಸುವ ಸನ್ನಿವೇಶ ಇದ್ದರೆ ಯಾವ ಆಡಳಿತ, ರಾಜಕೀಯ ಪಕ್ಷಗಳೂ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ.  ಈಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾಯ್ದೆ ಯಾರಿಗೆ ಬೇಕು? ಯಾರ ಅಗತ್ಯಕ್ಕೆ ಜಾರಿಗೆ ತರಲಾಗಿದೆ ಎಂದು ಪ್ರಶ್ನಿಸುವ ಮನಸ್ಸುಗಳೂ ಕಂಡುಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಈ ಘೋಷವಾಕ್ಯ ನಮ್ಮೆಲ್ಲರ ನಾಡಿ ಮಿಡಿತ. ಇಂತಹ ಮನೋಭಾವಕ್ಕೆ ಪೂರಕವಾದ ನಾಟಕಗಳು ಒಟ್ಟು ಪ್ರಯತ್ನವಾಗಿ ರಂಗದ ಮೇಲೆ ಮೂಡಿಬರುತ್ತಿಲ್ಲ ಎಂಬ ನೋವು ಕಾಡುತ್ತಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ  ರಂಗಭೂಮಿ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿದೆ. ಈ ಮೂಲಕ ನಾವು ನಿಂತ ನೆಲ ಗಟ್ಟಿಗೊಳಿಸಬೇಕಿದೆ ಎಂದರು.

ರಂಗಾಯಣ ಮಾಜಿ ನಿರ್ದೇಶಕ ಡಾ.ಎಂ.ಗಣೇಶ್ ಅವರ ಕುರಿತು ಟಿ.ಪಿ.ಭಾಸ್ಕರ್, ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಅವರನ್ನು ಕುರಿತು ಡಾ.ವೆಂಕಟೇಶ್ ಆವರು ಅಭಿನಂದನಾ ಭಾಷಣ ಮಾಡಿದರು. ನಂತರ ಅವರನ್ನು ಸನ್ಮಾನಿಸಲಾಯಿತು.

ಡಾ. ಗಣೇಶ್ ಮಾತನಾಡಿ, ಸ್ವಾತಂತ್ರ್ಯ ನಂತರದ ಭಾರತ ಯಾವ ರೀತಿ ಇರಬೇಕು ಎಂದು ಗೊತ್ತುಪಡಿಸಿದ್ದೇ ರಂಗಾಯಣ, ಸಮುದಾಯ ಹಾಗೂ ನೀನಾಸಂ ರಂಗಸಂಸ್ಥೆಗಳು. ಈ ತಂಡಗಳು ಮಾಡಿದ ನಾಟಕಗಳು ಸಮಾಜಕ್ಕೆ ದಿಕ್ಕು ತೋರಿದವು ಎಂದರು.

ರಂಗ ಸಮಾಜಕ್ಕೆ ಗಟ್ಟಿತನ ಇದೆ. ಅವಧಿ ಮುಂಚೆಯೇ ತಮ್ಮನ್ನು ರಂಗಾಯಣ ನಿರ್ದೇಶಕ ಸ್ಥಾನನದಿಂದ ಉಚ್ಚಾಟಿಸಲಾಯಿತು. ಆಯ್ಕೆ ಮಾಡಿದ್ದು ಸರ್ಕಾರ ಅಲ್ಲ. ರಂಗ ಸಮಾಜ. ಅಂದು ಸಚಿವೆ ಉಮಾಶ್ರೀ ಅವರು ಬೇರೆ ಹೆಸರು ಸೂಚಿಸಿದ್ದರು. ಆದರೆ, ರಂಗ ಸಮಾಜ ಒಪ್ಪಲಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದರು‌. ಕೊನೆಗೆ ತಮ್ಮನ್ನು ನೇಮಕ ಮಾಡಲಾಯಿತು. ಕಲಾವಿದರು ಯಾವುದೋ ಪಕ್ಷದ ವಕ್ತಾರರು ಎನ್ನುವ ರೀತಿ ಬದಲಾಯಿಸಬಹುದೇ ಎಂದು ಪ್ರಶ್ನಿಸಿದರು.

ರಂಗಕರ್ಮಿ ಕೊಟ್ರಪ್ಪ ಜಿ.ಹಿರೇಮಾಗಡಿ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಜಿ.ಆರ್.ಲವ, ನಮ್‌ ಟೀಂ ಮುಖ್ಯಸ್ಥ ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)