ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿ: ಸೆ. 30ರ ಗಡುವು

ಬೇಡಿಕೆ ಈಡೇರದಿದ್ದರೆ ಅ. 1ರಿಂದ ಹೋರಾಟ ತೀವ್ರ: ಕೂಡಲಸಂಗಮ ಶ್ರೀ
Last Updated 3 ಸೆಪ್ಟೆಂಬರ್ 2021, 3:59 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರ ತಾನು ನೀಡಿದ ಭರವಸೆಯಂತೆ ಲಿಂಗಾಯತ ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಲಿಂಗಾಯತರಿಗೆ ಸೆ. 30ರ ಒಳಗೆ 2 ‘ಎ’ ಮೀಸಲಾತಿ ಘೋಷಣೆ ಮಾಡಬೇಕು ಎಂದುಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಕೊಟ್ಟ ಭರವಸೆಯಂತೆ ಸದನದಲ್ಲಿ ವಿಷಯ ಪ್ರಸ್ತಾಪಿಸಬೇಕು. ಸೆ. 30ರ ಒಳಗೆ ನಿರ್ಧಾರ ಪ್ರಕಟಿಸಬೇಕು. ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಅ. 1ರಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಮೀಸಲಾತಿಗಾಗಿ ಕೂಡಲ ಸಂಗಮದಿಂದ ವಿಧಾನಸೌಧದವರೆಗೆ 31 ದಿನಗಳು ಪಾದಯಾತ್ರೆ ನಡೆಸಲಾಗಿತ್ತು. ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿ ಒತ್ತಾಯಿಸಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 23 ದಿನಗಳು ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರನ್ನು ಸೇರಿಸಿ ವಿರಾಟ್ ಪ್ರದರ್ಶನ ಮಾಡಿದ್ದೇವೆ. ಆದರೂ, ಸರ್ಕಾರದ ಭರವಸೆ ಆದೇಶವಾಗಿಲ್ಲ. ಗಡುವಿನ ಒಳಗೆ ಬೇಡಿಕೆ ಈಡೇರದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಳವಳಿಯ ಭಾಗವಾಗಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಆ.26ರಿಂದ ಮಲೆಮಹದೇಶ್ವರ ಬೆಟ್ಟದಿಂದ ಆರಂಭಿಸಲಾಗಿದೆ. ಅಭಿಯಾನ ಅ.1ರವರೆಗೆ ನಡೆಯುತ್ತಿದೆ. ಸೆ.3ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸೊರಬ, ಶಿಕಾರಿಪುರ, ಸಾಗರದಲ್ಲಿ ಮುಂದುವರಿಯಲಿದೆ. ಅಭಿಯಾನದ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಮಾತು ನೆನಪಿಸುವುದು, ಮೀಸಲಾತಿ ಹಕ್ಕು ಪಡೆಯಲು ನಿರಂತರ ಹೋರಾಟ ಅನಿವಾರ್ಯ. ಪಂಚ ಲಕ್ಷ ಸಂಖ್ಯೆಯ ಜನರು ಹೋರಾಟದಲ್ಲಿ ಭಾಗವಹಿಸುವರು. ಹೊಸ ಇತಿಹಾಸ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗುವುದು. ಹೋರಾಟ ಯಾರ ವಿರುದ್ಧವೂ ಅಲ್ಲ. ಎಲ್ಲ ಹಿಂದುಳಿದ ವರ್ಗಗಳಿಗೂ ಮೀಸಲಾತಿ ದೊರಕಬೇಕು ಎನ್ನುವುದು ತಮ್ಮ ಆಶಯ. ಸಮಾಜದ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿದರು.

ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣಕ್ಕೆ ಶಿವಪ್ಪ ನಾಯಕ, ಬಸ್‌ನಿಲ್ದಾಣಕ್ಕೆ ಕೆಳದಿ ಚನ್ನಮ್ಮ ಹಾಗೂ ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ ಬಸವಣ್ಣ ಅವರ ಹೆಸರು ಇಡುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮಲ್ಲಿ ಕಾರ್ಜುನ ಸ್ವಾಮೀಜಿ, ಸಮಾಜದ ಮುಖಂಡ ರಾದ ಎಚ್.ವಿ.ಮಹೇಶ್ವರಪ್ಪ, ಎಚ್.ಎಂ.ಚಂದ್ರಶೇಖರಪ್ಪ, ಮಲ್ಲೇಶಪ್ಪ, ನಟರಾಜ್, ಶಿವಣ್ಣ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT