ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ಕದಂಬರ ಅವಧಿಯ ಇಟ್ಟಿಗೆ ನೆಲಹಾಸು ಪತ್ತೆ

Last Updated 15 ಫೆಬ್ರುವರಿ 2023, 6:45 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಹತ್ತಿರದ ತಾಳಗುಂದ ಗ್ರಾಮದ ಗುಡ್ಡದಲ್ಲಿ ಕದಂಬರ ಕಾಲದ ಸುಟ್ಟ ಇಟ್ಟಿಗೆಗಳಿಂದ ಮಾಡಲಾದ ನೆಲಹಾಸು ಪತ್ತೆಯಾಗಿದೆ.

ಈ ಗ್ರಾಮವು ಕದಂಬರ ಮೂಲನೆಲೆಯಾಗಿದ್ದು, ಇಲ್ಲಿ ಈಗಾಗಲೇ ಕದಂಬರ ಅವಧಿಯ ಸಾಕಷ್ಟು ಐತಿಹಾಸಿಕ ಅವಶೇಷಗಳು ದೊರೆತಿವೆ. ಈಗ ಕದಂಬರ ಕಾಲದ ಮಡಿಕೆ ಚೂರುಗಳು ಮತ್ತು ಹಾಳಾದ ಪಾನಪಾತ್ರೆಗಳು ಗುಡ್ಡದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಪತ್ತೆಯಾಗಿವೆ.

ಇಲ್ಲಿನ ಪ್ರಸಿದ್ಧ ಪ್ರಣವೇಶ್ವರ ದೇವಾಲಯದ ಪಕ್ಕದಲ್ಲಿರುವ ಗುಡ್ಡ ಪ್ರದೇಶದಲ್ಲಿ ಸಸಿ ನೆಡಲೆಂದು ಗುಣಿಗಳನ್ನು ತೋಡಲಾಗಿದೆ. ಈ ಪ್ರದೇಶದಲ್ಲಿ 3–4ನೇ ಶತಮಾನಕ್ಕೆ ಸೇರಬಹುದಾದ ಸುಟ್ಟ ಮಣ್ಣಿನ ಮಡಿಕೆಗಳ ಚೂರುಗಳು, ಪಾನಪಾತ್ರೆಗಳು ಕಂಡು ಬಂದಿವೆ. ಇದನ್ನು ಗಮನಿಸಿದ ಪತ್ರಕರ್ತ ಎಂ.ನವೀನ ಕುಮಾರ ಹಾಗೂ ಇತಿಹಾಸ ಸಂಶೋಧಕ ರಮೇಶ ಹಿರೇಜಂಬೂರು ನೇತೃತ್ವದಲ್ಲಿ ಇನ್ನಷ್ಟು ಸ್ಥಳ ಪರಿಶೀಲನೆ ಮಾಡಿದಾಗ, ಪ್ರಾಚೀನ ಇಟ್ಟಿಗೆಗಳಿಂದ ನಿರ್ಮಿಸಿದ ರಚನೆ ಕಂಡು ಬಂದಿದೆ. ಇದರಲ್ಲಿ ದೊರೆತ ಒಂದು ಪೂರ್ಣ ಇಟ್ಟಿಗೆಯ ಗಾತ್ರವು ಉದ್ದ 43 ಸೆಂ.ಮೀ, ಅಗಲ 21 ಸೆಂ.ಮೀ ಮತ್ತು ದಪ್ಪ 8 ಸೆಂ.ಮೀ ಇದೆ.

ಇದೇ ಗಾತ್ರದ ಇಟ್ಟಿಗೆಗಳಿಂದ ರಚಿಸಿದ ಒಂದು ಕುಂಬಾರನ ಕುಲುಮೆ ತಾಳಗುಂದದಲ್ಲಿ ಮೂರು ವರ್ಷಗಳ ಹಿಂದೆ ಪತ್ತೆಯಾಗಿತ್ತು.

ಈಗ ಪತ್ತೆಯಾಗಿರುವ ಇಟ್ಟಿಗೆಗಳೂ ಹಿಂದೆ ದೊರೆತಿದ್ದ ಕುಂಬಾರನ ಕುಲುಮೆ ರಚಿಸಲು ಬಳಸಿದ್ದ ಇಟ್ಟಿಗೆಗಳ ಗಾತ್ರವನ್ನೇ ಹೋಲುವುದರಿಂದ ಮತ್ತು ಈ ರಚನೆಯ ಸುತ್ತಲೂ ಹೇರಳವಾಗಿ ಪಾನ ಬಟ್ಟಲುಗಳು, ಒಡೆದ ಕೆಂಪು ಬಣ್ಣದ ಮಡಿಕೆ ಚೂರುಗಳು ದೊರೆತಿರುವುದರಿಂದ ಇಲ್ಲೂ ಬೃಹತ್ ಪ್ರಮಾಣದ ಮಡಿಕೆ ಮತ್ತು ಪಾನಬಟ್ಟಲುಗಳ ತಯಾರಿಕಾ ಘಟಕ ಇದ್ದಿರಬಹುದಾದ ಸಾಧ್ಯತೆಗಳಿವೆ. ಇದೇ ರೀತಿಯ ಅವಶೇಷಗಳು ಗುಡ್ನಾಪುರದ ಉತ್ಖನನ ಕಾರ್ಯದಲ್ಲಿ ದೊರೆತಿದ್ದ ಉಲ್ಲೇಖಗಳಿವೆ.

ಹಾಗಾಗಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಪ್ರದೇಶವನ್ನು ಸಂರಕ್ಷಿಸಿ, ಉತ್ಖನನ ಕಾರ್ಯವನ್ನು ತಕ್ಷಣ ಮಾಡಬೇಕು ಎಂದು ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ ಕಾಡೇರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT