ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ ಕಾಡಲ್ಲಿ ಮತ್ತೆ ಒಂಟಿ ಸಲಗ: ಹೆಚ್ಚಿದ ಆತಂಕ

ಭಯದ ನೆರಳಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ
Last Updated 7 ಜೂನ್ 2020, 13:01 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಆಗುಂಬೆ ಕಾಡಿನ ಅತಿಥಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿದೆ.

ಮೇ ತಿಂಗಳಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಭಯದ ನೆರಳಿನಲ್ಲಿಯೇ ಆಗುಂಬೆ ಭಾಗದ ಜನರು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.ಕಾಡಾನೆ ಸ್ಥಳಾಂತರ ವಿಚಾರ ಈಗ ನೇಪಥ್ಯಕ್ಕೆ ಸರಿದಿದೆ.

8-10 ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿರುವ ಒಂಟಿ ಕಾಡಾನೆಯಿಂದ ಕೃಷಿ ಬದುಕು ಸಂಪೂರ್ಣವಾಗಿ ನಾಶವಾಗಿದೆ. ಪದೇ ಪದೇ ಜಮೀನಿನ ಮೇಲೆ ದಾಳಿ ಇಡುವ ಕಾಡಾನೆ ಬೆಳೆಯನ್ನು ನಾಶಮಾಡುತ್ತಿದೆ. ಕೃಷಿಗೆ ವೆಚ್ಚ ಮಾಡಿದ ಹಣವೆಲ್ಲಾ ಕಾಡಾನೆಯ ದಾಳಿಯಿಂದ ನಾಶವಾಗುತ್ತಿದೆ ಎಂಬುದು ಈ ಭಾಗದ ಜನರ ಅಳಲು.

ಮಲ್ಲಂದೂರು ಗ್ರಾಮದ ಧರ್ಮಪ್ಪ ಅವರನ್ನು ತುಳಿದು ಸಾಯಿಸಿದ ಕಾಡಾನೆ. ಕಾರೇಕುಂಬ್ರಿ ಚಂದಶೇಖರ್ ಅವರ ಸಾವಿಗೂ ಕಾರಣವಾಗಿತ್ತು. ಅಗಸರಕೋಣೆ ಲಕ್ಷ್ಮಣ ನಾಯ್ಕ ಅವರ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಮಾಸುವ ಮುನ್ನವೇ ಮತ್ತೆ ಆನೆ ಪ್ರತ್ಯಕ್ಷವಾಗಿದೆ.

ಆನೆ ದಾಳಿಯಿಂದ ಅಡಿಕೆ, ಬಾಳೆ, ಕಾಳುಮೆಣಸು, ಭತ್ತ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೋವಿಡ್ -19ರಿಂದ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಭಯದಿಂದ ದೂರ ಉಳಿದಿದ್ದರೂ ಸಾರ್ವಜನಿಕರ ಓಡಾಟಕ್ಕೆ ಕಾಡಾನೆ ಅಡ್ಡಿಯಾಗಿದೆ ಎಂದು ಈ ಭಾಗದವರು ಹೇಳುತ್ತಾರೆ.

ಕಾಡಾನೆ ಸ್ಥಳಾಂತರಗೊಳಿಸುವಂತೆ ಈ ಭಾಗದ ಜನರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. 2017ರಲ್ಲಿ ಆಗಿನ ಅರಣ್ಯ ಸಚಿವ ರಮಾನಾಥ ರೈ ಆಗುಂಬೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳೀಯರೊಂದಿಗೆ ಸಂವಾದ, ಚರ್ಚೆ ನಡೆಸಿ, ಆನೆ ಸ್ಥಳಾಂತರದ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಆನೆ ದಾಂಧಲೆ ದಿನದಿಂದ ದಿನಕ್ಕೆ ಹೆಚ್ಚು ಭಯ ಮೂಡಿಸುತ್ತಿದೆ. ಆಗುಂಬೆ ಭಾಗದ ಜನರ ಗೋಳು ತಿಳಿದಿದ್ದರೂ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆರೋಪ.

ಟೈರ್‌ಗೆ ಬೆಂಕಿ, ಮೆಣಸಿನ ಹೊಗೆ ಪರಿಣಾಮಕಾರಿ:

‘ಕಾಡಾನೆ ಹಳ್ಳಿಗೆ ಬರದಂತೆ ಟೈರ್‌ಗೆ ಬೆಂಕಿ ಹಚ್ಚಿ ಮೆಣಸಿನ ಹೊಗೆ ಹಾಕಲಾಗುತ್ತದೆ. ಮೆಣಸಿನ ಹೊಗೆ ಘಾಟಿಗೆ ಆನೆ ಊರಿನ ಕಡೆ ಸುಳಿಯುವುದಿಲ್ಲ. ಗ್ರಾಮಸ್ಥರಿಗೆ ಟೈರ್ ಹಾಗೂ ಮೆಣಸಿನ ಕಾಯಿ ನೀಡಿ ಬೆಂಕಿ ಹಚ್ಚಿ ಹೊಗೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರಯೋಗದಿಂದ ಕಾಡಾನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದ್ದೇವೆ’ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT