ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣಂದೂರು: ಬಹುಮುಖ ಪ್ರತಿಭೆಯ ಶಿಕ್ಷಕ ಕುಮಟಾ ಶ್ರೀಕಾಂತ್

ಇಂದು ಶಿಕ್ಷಕರ ದಿನಾಚರಣೆ: ಜಿಲ್ಲೆಯ ಇಬ್ಬರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
Last Updated 5 ಸೆಪ್ಟೆಂಬರ್ 2021, 4:17 IST
ಅಕ್ಷರ ಗಾತ್ರ

ಕೋಣಂದೂರು: ಬಹುಮುಖ ಪ್ರತಿಭೆಯ ಶಿಕ್ಷಕ ಕುಮಟಾ ಶ್ರೀಕಾಂತ್ ರಾಮಪಟಗಾರ. ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 12 ವರ್ಷಗಳಿಂದ ರಂಗ (ವಿಶೇಷ ಶಿಕ್ಷಕ) ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಸಂಡಳ್ಳಿಯವರು. ತಂದೆ ರಾಮ ಪಟಗಾರ. ತಾಯಿ ಮಹಾದೇವಿ. ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್‌ನಲ್ಲಿ ಸ್ನಾತಕೋತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಇನ್ ಡ್ರಾಮಾ ಪದವಿ ಪಡೆದಿರುವ ಅವರು 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಾಟಕ ನಿರ್ದೇಶನ, ಸಿನಿಮಾ, ಕಿರುತೆರೆ, ನೀನಾಸಂ ತಿರುಗಾಟ, ಜನಮನದಾಟ ತಂಡದ ತಿರುಗಾಟ, ಮಿಮಿಕ್ರಿ, ಕಿರು ಪ್ರಹಸನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇಂತಹ ಪ್ರತಿಭೆಯುಳ್ಳ ಅವರು 2021-21ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಬಂದ ಹೊಸ್ತಿಲಲ್ಲಿ ‘ಪ್ರಜಾವಾಣಿ’ ಜತೆ ಅವರು ಮಾತುಕತೆ ನಡೆಸಿದ್ದಾರೆ.

ರಂಗ ಕಲೆಯಲ್ಲಿ ನಿಮಗೆ ಆಸಕ್ತಿಮೂಡಿದ್ದು ಹೇಗೆ?
ಬಾಲ್ಯದಲ್ಲಿ ನಮ್ಮದು ಅವಿಭಕ್ತ ಕುಟುಂಬ. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ ಯಕ್ಷಗಾನ ಕಲಾವಿದರು. ಅವರೊಟ್ಟಿಗಿನ ನಂಟು ಯಕ್ಷಗಾನವೂ ಸೇರಿದಂತೆ ರಂಗ ಕಲೆಯತ್ತ ಆಸಕ್ತಿ ಮೂಡಿಸಿತು.ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಣ್ಣ ಪುಟ್ಟ ನಾಟಕದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಕಡೆಯ ನಂಟು ಇನ್ನಷ್ಟು ಹೆಚ್ಚಾಯಿತು. ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಟಿ.ಜಿ. ಭಟ್ ಅವರ ಮಾರ್ಗದರ್ಶನದಿಂದ ನೀನಾಸಂ ಸೇರುವ ಪ್ರೇರಣೆ ಸಿಕ್ಕಿತು. ನಂತರ ಸಾಣೇಹಳ್ಳಿ ಮಠದ ಆಶ್ರಯದ ಶಿವಸಂಚಾರದಲ್ಲಿ ಕೆಲಸ ಮಾಡಿದೆ.

ನೀವು ಅಭಿನಯಿಸಿದ ನಾಟಕಗಳ ಬಗ್ಗೆ?
ಅತಿ ಹೆಚ್ಚು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಬಸ್ ಕಂಡಕ್ಟರ್, ರಂಗಿ ನಾಟಕದಲ್ಲಿ ಸ್ತ್ರೀ ಪಾತ್ರ ಮಾಡಿದ್ದೇನೆ. ಸಾಮಾಜಿಕ ನಾಟಕಗಳು ನನ್ನ ಆಸಕ್ತಿಯ ವಿಷಯ.

ರಂಗ ಶಿಕ್ಷಕನಾಗಿ ನಿಮ್ಮ ಅನುಭವ ಮಕ್ಕಳಿಗೆ ಹೇಗೆ ವರ್ಗಾಯಿಸಲ್ಪಟ್ಟಿದೆ?
ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಯದ ಆಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಹಲವು ಮಕ್ಕಳ ನಾಟಕಗಳಿಗೆ ಪ್ರಶಸ್ತಿ ಬಂದಿದೆ. ‘ಜಗದ ಬಿರುಕಿಗೆ ಗಾಂಧಿ ಮದ್ದು’ ಮಕ್ಕಳ ನಾಟಕ ರಾಷ್ಟ್ರೀಯ ನಾಟಕೋತ್ಸವದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿದೆ. ‘ಬೆಳವಡಿ ಮಲ್ಲಮ್ಮ’, ‘ಕಾಕನ ಕೋಟೆ’ ಮಕ್ಕಳ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರೀಯ ಪಾತ್ರಾಭಿನಯದಲ್ಲಿ ದುಶ್ಚಟದ ಕುರಿತಾದ ಮಕ್ಕಳ ನಾಟಕ ಆಯ್ಕೆಯಾಗಿದೆ. ಸಮಾಜ ವಿಜ್ಞಾನದ ‘ಸಿಪಾಯಿ ದಂಗೆ’ ಹಾಗೂ ಕನ್ನಡ ಭಾಷೆಯ ಯುದ್ಧ ಪಾಠಗಳನ್ನು ನಾಟಕಕ್ಕೆ ರೂಪಾಂತರಿಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಅಭಿನಯ ಹೇಳಿಕೊಟ್ಟು, 10ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಗೆ ನೆರವಾಗುವಂತೆ ರೂಪಿಸಿದ್ದೇನೆ.

ನಿಮಗೆ ಸಂದ ಪ್ರಶಸ್ತಿಗಳು?
‘ಕಾಕನ ಕೋಟೆ’ ನಾಟಕ ನಿರ್ದೇಶನಕ್ಕಾಗಿ ಉತ್ತಮ ನಿರ್ದೇಶಕ ಪ್ರಶಸ್ತಿ, ಅನೇಕ ಸಂಘ–ಸಂಸ್ಥೆಗಳಿಂದ ಗೌರವ ಸಿಕ್ಕಿದೆ.

ರಂಗ ಕಲಾ ಶಿಕ್ಷಕರಿಗೂ ಇತರ ವಿಷಯಗಳ ಶಿಕ್ಷಕರಿಗೆ ಹೋಲಿಸಿದರೆ ಮನ್ನಣೆ ಕಡಿಮೆ ಎಂಬ ಮಾತಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ರಂಗ ಶಿಕ್ಷಕರಿಗೆ ಸಮರ್ಪಕವಾದ ಪಠ್ಯ ವಸ್ತು ನಿಗದಿಯಾಗಿಲ್ಲ. ಪಾಠ ಯೋಜನೆ, ಶಿಕ್ಷಕ ಕೈಪಿಡಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಿಗೆ ಸೂಕ್ತವಾದ ಪರಿಹಾರ ಯೋಜನೆ ರೂಪುಗೊಳ್ಳಬೇಕು.

ರಂಗಭೂಮಿ ಕಡೆಗೆ ಒಲವು ಕಡಿಮೆಯಾಗುತ್ತಿರುವ ಈಚಿನ ದಿನಗಳಲ್ಲಿ ಯುವಕರಿಗೆ ನಿಮ್ಮ ಸಂದೇಶ?
ಯುವ ಜನರು ರಂಗ ಭೂಮಿಯ ಪಸೆಯನ್ನು ಅಂಟಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಸಕ್ತ ಮಕ್ಕಳನ್ನು ಹುಡುಕಿ ಪ್ರೇರೇಪಿಸುವ ಕೆಲಸ ಮಾಡಿದಲ್ಲಿ ಖಂಡಿತವಾಗಿಯೂ ರಂಗಭೂಮಿಗೆ ಭವಿಷ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT