ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಪ್ಪಾಯದಿಂದ ಸಂತೃಪ್ತ ಜೀವನ ಕಂಡುಕೊಂಡ ಯುವ ರೈತ

Last Updated 23 ಜೂನ್ 2021, 4:38 IST
ಅಕ್ಷರ ಗಾತ್ರ

ಆನಂದಪುರ: ಆಧುನಿಕ ಯುಗದಲ್ಲಿ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ ತಮ್ಮ ಹಳ್ಳಿಯಲ್ಲಿಯೇ ಉತ್ತಮ ಕೃಷಿ ಮಾಡಿರುವ ಯುವ ರೈತ ಗಣೇಶ್‌ ಸಾಧನೆಯ ಹಾದಿಯಲ್ಲಿದ್ದಾರೆ.

ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಕೆರೆಹಿತ್ಲು ಗ್ರಾಮದ ಕೃಷಿಕ ಗಣೇಶ್‌ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ. ಕೃಷಿಯಲ್ಲಿಯೂ ಉತ್ತಮ ಸಾಧನೆ ಮಾಡಿ ಕೈತುಂಬ ಆದಾಯ ಪಡೆಯಬಹುದು ಎಂಬುದನ್ನು ತೋರಿಸುವ ಮೂಲಕ ಸದಾ ಕೆಲಸದಲ್ಲೇ ತಮ್ಮ ಜೀವನ ಕಳೆಯುವ ನಗರ ಉದ್ಯೋಗಿಗಳ ಮುಂದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಮೊದಲು ವಿವಿಧ ರೀತಿಯ ಸ್ವಂತ ಉದ್ಯೋಗಗಳಿಗೆ ಕೈ ಹಾಕಿದರು. ಇದರಿಂದ ಸಮಯಕ್ಕೆ ಸರಿಯಾಗಿ ಹೂಡಿದ ಬಂಡವಾಳ ಸಹ ಸಿಗಲಿಲ್ಲ. ಕೆಲವರು ಹಣ ನೀಡದೆ ದಿನ ಮುಂದೂಡುತ್ತಾ ಹೋದರು. ಸಾಲದ ಸುಳಿಗೆ ಸಿಲುಕುವ ಸಂದರ್ಭದಲ್ಲಿ ಅವರ ಬದುಕು ಕೃಷಿಯಿಂದ ಹಸನಾಯಿತು.

ಎರಡು ವರ್ಷಗಳಿಂದ ಪಪ್ಪಾಯ ಬೆಳೆಯುವ ಮೂಲಕ ಯಶಸ್ಸು ಕಂಡಿದ್ದಾರೆ. ಮೊದಲು ಒಂದು ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದರು. ಇದರಿಂದ ಉತ್ತಮ ಆದಾಯ ಪಡೆದ ಕಾರಣ ಪ್ರಸ್ತುತ 4 ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದಾರೆ. ಜತೆಗೆ ಅಡಿಕೆ ಗಿಡಗಳನ್ನು ಸಹ ನೆಟ್ಟಿದ್ದಾರೆ.

‘ದಾವಣಗೆರೆಯಿಂದ ಒಂದು ಗಿಡಕ್ಕೆ ₹ 18ಕ್ಕೆ ಖರೀದಿ ಮಾಡಿ ತಂದಿದ್ದೇವೆ. ಕೊಳವೆಬಾವಿ ಸೇರಿ ಸುಮಾರು ₹ 4 ಲಕ್ಷ ಖರ್ಚು ಮಾಡಲಾಗಿದೆ. ಕೃಷಿ ಮಾಡಿದ 10 ತಿಂಗಳಿಂದ ಸುಮಾರು 3 ವರ್ಷದವರೆಗೆ ನಿರಂತರ ಆದಾಯ ಸಿಗುತ್ತದೆ’ ಎಂದು ಗಣೇಶ್ ವಿವರಿಸಿದರು.

‘ಪಪ್ಪಾಯಿಯ ಒಂದು ಕಾಯಿಸುಮಾರು 2ರಿಂದ 3 ಕೆ.ಜಿ. ಬರುತ್ತದೆ. ತಿಂಗಳಿಗೆ 8ರಿಂದ 10 ಕ್ವಿಂಟಲ್‌ ಸಿಗುತ್ತದೆ. ಒಂದು ಕೆ.ಜಿ.ಗೆ ₹ 10 ಸಿಗುತ್ತದೆ. ವ್ಯಾಪಾರಸ್ಥರು ತೀರ್ಥಹಳ್ಳಿಯಿಂದ ಮನೆಬಾಗಿಲಿಗೆಬಂದು ಪಪ್ಪಾಯ ತೆಗೆದುಕೊಂಡು ಹೋಗುವುದರಿಂದ ಮಾರಾಟದ
ಸಮಸ್ಯೆ ಇಲ್ಲದಂತಾಗಿದೆ’ಎನ್ನುವರು ಗಣೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT