ಗುರುವಾರ , ಜನವರಿ 27, 2022
27 °C
ಕಾಳಮಂಜಿ ಕಾನನದ ನಡುವೆ ಕೃಷಿಯಲ್ಲಿ ತೊಡಗಿರುವ ಶ್ರೀಕಾಂತ್

ಸಂಗೀತ ಉಪಾಸನೆಯ ಜೊತೆಗೆ ಕೃಷಿ ಕಾಯಕ

ಸಂತೋಷ್‌ಕುಮಾರ್‌ ಕಾರ್ಗಲ್‌ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಇಲ್ಲಿಗೆ ಸಮೀಪದ ಕಾಳಮಂಜಿ ಕತ್ತಲ ಕಾನನದ ನಡುವೆ ಸಂಗೀತ ಉಪಾಸನೆಯೊಂದಿಗೆ ಹಿರಿಯರ ಬಳುವಳಿಯಾಗಿ ಬಂದ ಕೃಷಿ ಕಾಯಕವನ್ನು ಮೈಗೂಡಿಸಿಕೊಂಡು ಪ್ರಗತಿಪರ ಕೃಷಿಕರೆಂದು ಗುರುತಿಸಿಕೊಂಡಿದ್ದಾರೆ ಶ್ರೀಕಾಂತ್ ಕಾಳಮಂಜಿ.

ತಂದೆ ನಾರಾಯಣಪ್ಪ ಮತ್ತು ತಾಯಿ ಅನ್ನಪೂರ್ಣಮ್ಮ ಕಷ್ಟಪಟ್ಟು ದುಡಿಯುತ್ತಿದ್ದ ಕೃಷಿ ಕಾಯಕವನ್ನು ನೋಡುತ್ತಲೇ ಕಮರ್ಷಿಯಲ್‌ ಪ್ರಾಕ್ಟೀಸ್‌ನಲ್ಲಿ ಡಿ‍ಪ್ಲೊಮಾ ಪದವಿ ಪಡೆದು ಪಟ್ಟಣ ಸೇರುವ ಕನಸು ಕಂಡಿದ್ದ ಶ್ರೀಕಾಂತ್, ಪದವಿ ಮುಗಿಯುತ್ತಿದ್ದಂತೆ ಮೈಗೂಡಿಕೊಂಡ ತಬಲಾ, ಹಾರ್ಮೋನಿಯಂ ವಾದನ ಮತ್ತು ರಂಗಭೂಮಿ ಚಟುವಟಿಕೆ ಶರಾವತಿ ಕೊಳ್ಳದಲ್ಲಿಯೇ ಬದುಕು ನೆಲೆಯೂರಲು ಕಾರಣವಾಯಿತು.

ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದುವರಿಯಲು ಆದಾಯದ ಮೂಲ ಬೇಕಲ್ಲ. ಅದಕ್ಕಾಗಿಯೇ ಕಾಳಮಂಜಿ ಕಾನನದಲ್ಲಿರುವ 5 ಎಕರೆ ಕೃಷಿ ಜಮೀನಿನಲ್ಲಿ ಕಾಯಕದಲ್ಲಿ ತೊಡಗಿದರು. ಹಗಲು ವೇಳೆ ಕೃಷಿಯಲ್ಲಿ ಹೊಸ ಅನ್ವೇಷಣೆ ಮಾಡತೊಡಗಿದರು. ರಾತ್ರಿಯೆಲ್ಲಾ ರಾಗ ಸಂಯೋಜನೆ, ಸಂಗೀತೋಪಾಸನೆಯಲ್ಲಿ ತೊಡಗಲು ಮನೆಯ ಮಹಡಿಯ ಮೇಲಿರುವ ಕೊಠಡಿಯಲ್ಲಿ ರೆಕಾರ್ಡಿಂಗ್ ಸ್ಟುಡಿಯೋ ತೆರೆದು ಕೆಲಸ ಮಾಡಿದರು.

ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನವನ್ನು ಮಾಡಿದೆ. ಯೂಟ್ಯೂಬ್ ಚಾನಲ್‌ನಲ್ಲಿ 75ಕ್ಕೂ ಹೆಚ್ಚು ಹಾಡುಗಳನ್ನು ತಮ್ಮದೇ ಸ್ವಂತ ರಾಗ ಸಂಯೋಜನೆಯಲ್ಲಿ ರೆಕಾರ್ಡಿಂಗ್ ಮಾಡಿ ಜೋಡಣೆ ಮಾಡಿದ್ದಾರೆ. ಇವು ಮುಖ್ಯವಾಗಿ ಪ್ರಕೃತಿ, ಕೃಷಿ ಮತ್ತು ಭಾವ ಸಂಯೋಜನೆಯೊಂದಿಗೆ ಕೂಡಿದ್ದಾಗಿವೆ.

ಅಡಿಕೆ ಪ್ರಧಾನ ಕೃಷಿಯಾಗಿ, ಭತ್ತದ ಬೆಳೆಯನ್ನು ಜೀವನ ನಿರ್ವಹಣೆಗೆ ಅಗತ್ಯವಾಗಿರುವಷ್ಟು ಬೆಳೆದು, ಕಬ್ಬು ಮತ್ತು ತೆಂಗು ಬೆಳೆದಿದ್ದಾರೆ. ಕೃಷಿ ಕೆಲಸಕ್ಕೆ ಕಾರ್ಮಿಕರು ದೊರಕದಿದ್ದಾಗ ತೋಟಕ್ಕೆ ಮಣ್ಣು ಹಾಕಲು ಸ್ವಂತದ್ದಾದ ಕಲ್ಪನೆಯ ರೋಪ್‌ವೇ ತಂತ್ರಜ್ಞಾನ ಬಳಸಿಕೊಂಡು ಮಣ್ಣು ತುಂಬುವ ಕೆಲಸವನ್ನು ಮಾಡಿದ ಕೀರ್ತಿ ಇವರದ್ದು.

 56 ವರ್ಷದ ಶ್ರೀಕಾಂತ್ 30 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೋವುಗಳನ್ನು ಸಾಕಣೆ ಮಾಡುವುದರ ಜೊತೆಗೆ ಕೊಟ್ಟಿಗೆಯಿಂದಲೇ ಕಲಕಿದ ಸೆಗಣಿಯ ನೀರನ್ನು ಎಲ್ಲಾ ಮರಗಳ ಬುಡಕ್ಕೆ ನೇರವಾಗಿ ಸೇರುವಂತೆ ಪೈಪ್‌ಲೈನ್ ಅಳವಡಿಸಿ ಗೊಬ್ಬರ ನೀಡುವ ಜವಾಬ್ದಾರಿ ಮೆರೆದಿದ್ದಾರೆ.

ಜಮೀನಿನ ಉದ್ದಕ್ಕೂ ಸುಲಭವಾಗಿ ಸಾಮಗ್ರಿಗಳನ್ನು ಗಾಲಿ ಗಾಡಿ ಸರಾಗವಾಗಿ ಹೋಗುವಂತೆ ದಾರಿ ವ್ಯವಸ್ಥೆಯನ್ನು ಮಾಡಿಕೊಂಡರು. ಹೆಮ್ಮರವಾಗಿ ಬೆಳೆದಿರುವ ಅಡಿಕೆ ಮರಗಳ ನಡುವೆ ಅಧಿಕ ಲಾಭ ನೀಡುವ ಕಾಳುಮೆಣಸನ್ನು ಬೆಳೆದರು. ಜೊತೆ ಜೊತೆಯಲ್ಲಿಯೇ ಲವಂಗ, ಕಾಫಿ, ಏಲಕ್ಕಿಯನ್ನು ಬೆಳೆದಿದ್ದಾರೆ. ತೋಟದ ಸುತ್ತಲೂ ಮಾವು, ಹಲಸು, ನೇರಳೆ ಮರಗಳನ್ನು ಬೆಳೆದಿದ್ದಾರೆ.

ಗಡಿಯಲ್ಲಿ ವಿದ್ಯುತ್ ಬೇಲಿಯನ್ನು ನಿರ್ಮಾಣ ಮಾಡಿದರೆ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಚಪೋಲ ಗಿಡಗಳನ್ನು ಗಡಿಯುದ್ದಕ್ಕೂ ಬೆಳೆಸಿ, ಅದರ ಮೇಲೆ ಬಲೆ ಹಾಕುವ ಕೆಲಸವನ್ನು ಮಾಡಿದ್ದಾರೆ. ಮಂಗಗಳ ಉಪಟಳವನ್ನು ತಡೆಯಲು ಬಂದೂಕಿನ ಬದಲು ನಾಯಿಗಳನ್ನು ಸಾಕಿದ್ದಾರೆ. ಮಂಗಗಳು ಅಡಿಕೆ ಕೃಷಿಯನ್ನು ಹಾಳು ಮಾಡುವುದನ್ನು ತಡೆಯಲು ಜಮೀನಿನಲ್ಲಿ ಪ್ರತ್ಯೇಕವಾಗಿ ಸಸಿ ಬಾಳೆ ನೆಟ್ಟು ಮಂಗಗಳಿಗೂ ಆಹಾರ ದೊರಕುವಂತೆ ನೋಡಿಕೊಂಡಿದ್ದಾರೆ.

ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸ ಇರುವ ಇವರು ಕಲಾಕಾರರು, ಸಂಗೀತಜ್ಞರು, ಕೃಷಿಕರೂ ಹೀಗೇ ಬಹುಮುಖದ ವ್ಯಕ್ತಿತ್ವವನ್ನು ಹೊಂದಿದ್ದರೂ ಸರಳ ಸಜ್ಜನಿಕೆಯ ನಡೆ. ಪದವೀಧರೆಯಾದ ಪತ್ನಿ ಸಾವಿತ್ರಿ ಸಂಗೀತ ಮತ್ತು ಕೃಷಿ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳಾದ ಧ್ರುವ ಮತ್ತು ದೀಪ್ತಿ ಪದವೀಧರರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.