ಶುಕ್ರವಾರ, ಜೂನ್ 18, 2021
29 °C
ಖಾಸಗಿ ಆಂಬುಲೆನ್ಸ್‌ಗಳಿಗೆ ಮುಂಗಡ ದರ ನಿಗದಿ ವ್ಯವಸ್ಥೆ ಮೂಲಕ ಕಡಿವಾಣ

ಕೋವಿಡ್‌ ರೋಗಿಗಳ ಹೆಣ ಸಾಗಣೆಗೂ ಹಣವೇ ಪ್ರಧಾನ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಪ್ರತಿದಿನ ಜೀವ ಕಳೆದುಕೊಳ್ಳುತ್ತಿರುವವರ ಪಾರ್ಥಿವ ಶರೀರ ಸಾಗಣೆಯಲ್ಲೂ ಹಣವೇ ಪ್ರಧಾನವಾಗಿರುವುದು ನೊಂದ ಕುಟುಂಬಗಳಿಗೆ ಮತ್ತಷ್ಟು ಹೊರೆಯಾಗಿದೆ. ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆಂಬುಲೆನ್ಸ್‌ಗಳಿಗೂ ಮುಂಗಡ ದರ ನಿಗದಿ ವ್ಯವಸ್ಥೆ ಜಾರಿಗೆ ತಂದಿದೆ.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಂಬುಲೆನ್ಸ್‌ಗಳು ಜಿಲ್ಲಾ ಕೇಂದ್ರದಿಂದ ವಿವಿಧ ತಾಲ್ಲೂಕು, ಇತರೆ ಜಿಲ್ಲಾ ಕೇಂದ್ರಗಳಿಗೆ ಸಾಗಣೆ ಮಾಡಲು ಅತ್ಯಧಿಕ ಹಣವನ್ನು ಪಡೆಯುತ್ತಿರುವುದು ಹಲವು ದಿನಗಳಿಂದ ಬೆಳಕಿಗೆ ಬಂದಿತ್ತು. ಒಂದು ಪ್ರಕರಣದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಶವ ಸಾಗಿಸಲು ಆಂಬುಲೆನ್ಸ್‌ಗೆ ₹ 35 ಸಾವಿರ ತೆತ್ತಿದ್ದಾರೆ. ಭದ್ರಾವತಿಗೆ ₹ 20 ಸಾವಿರ ನೀಡಿದ್ದಾರೆ. ವಿಷಯ ತಿಳಿದ ನಂತರ ಜಾಗೃತರಾದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದವರು ಕ್ರಮಿಸುವ ದೂರದ ಆಧಾರದ ಮೇಲೆ ಪ್ರತಿ ಕಿ.ಮೀಗೆ ದರ ನಿಗದಿ ಮಾಡಿದ್ದಾರೆ. ಮಾರುತಿ ಓಮ್ನಿ ವಾಹನಕ್ಕೆ ಪ್ರತಿ ಕಿ.ಮೀ.ಗೆ ₹ 11, ಟೆಂಪೋ ಟ್ರಾವೆಲ್ಸ್‌ಗಳಿಗೆ ₹ 16, ಇತರೆ ವಾಹನಗಳಿಗೆ ₹ 13 ನಿಗದಿ ಮಾಡಲಾಗಿದೆ. ನಗರದೊಳಗಿನ ಸಂಚಾರ, ಆಸ್ಪತ್ರೆ ಮುಂದೆ ಕಾಯುವಿಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

ಆಸ್ಪತ್ರೆ ಆವರಣದಲ್ಲೇ ಮುಂಗಡ ಪಾವತಿ ಕೌಂಟರ್:
ಮೃತರ ಕುಟುಂಬದ ಸದಸ್ಯರ ಶೋಷಣೆ ತಪ್ಪಿಸಲು ಆಸ್ಪತ್ರೆ ಆವರಣದಲ್ಲೇ ಮುಂಗಡ ಪಾವತಿ ಕೌಂಟರ್ ತೆರೆಯಲಾಗಿದೆ. ಆಂಬುಲೆನ್ಸ್‌ ಚಾಲಕರು ಈ ಕೌಂಟರ್‌ಗೆ ತೆರಳಿ ಚೀಟಿ ಪಡೆದುಕೊಳ್ಳಬೇಕು. ಆ ಚೀಟಿಯಲ್ಲಿ ನಮೂದಿಸಿದ ಸ್ಥಳಕ್ಕೆ ನಿಗದಿತ
ಪಾರ್ಥಿವ ಶರೀರ ತೆಗೆದುಕೊಂಡು ಹೋಗಬೇಕು. ನಮೂದಿಸಿದ ಹಣವನ್ನಷ್ಟೇ ಪಡೆಯಬೇಕು. ಹೆಚ್ಚಿನ ಹಣ ಪಡೆದರೆ ಅಂತಹ ವಾಹನಗಳ ಪರವಾನಗಿ ರದ್ದು ಮಾಡಲಾಗುತ್ತದೆ.

ಶವ ಸಂಸ್ಕಾರಕ್ಕೆ ಪ್ರತ್ಯೇಕ ಹಣ

ಕೋವಿಡ್‌ನಿಂದ ಮೃತಪಟ್ಟ ಶವಗಳನ್ನು ಸಾಗಿಸಲು ನಿಗದಿತ ದರ ಅನ್ವಯಿಸುತ್ತದೆ. ಒಂದು ವೇಳೆ ಕುಟುಂಬಸ್ಥರು ಶವ ಸಂಸ್ಕಾರಕ್ಕೂ ಸಹಾಯ ಪಡೆಯುವುದಾದರೆ ಅದಕ್ಕೆ ಪ್ರತ್ಯೇಕ ಹಣ ನೀಡಬೇಕು. ಈ ಕುರಿತು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿಲ್ಲ.

ನಾಲ್ಕು ಉಚಿತ ಪಿಪಿಇ ಕಿಟ್

ಆಂಬುಲೆನ್ಸ್‌ಗಳು ಶವ ಸಾಗಣೆ ಮಾಡುವಾಗ ಮೆಗ್ಗಾನ್ ಆಸ್ಪತ್ರೆ, ನಗರ ಪಾಲಿಕೆ, ಆರೋಗ್ಯ ಇಲಾಖೆಗಳು ತಲಾ ಎರಡು ಪಿಪಿಇ ಕಿಟ್‌ ನೀಡುತ್ತಿದ್ದವು. ಅವು ಚಾಲಕ ಮತ್ತು ಸಹಾಯಕರಿಗೆ ಬೇಕಾಗುತ್ತಿದ್ದವು. ಶವದ ಜತೆ ಸಾಗುವ ಅವರ ಕುಟುಂಬದ ಸದಸ್ಯರಿಗೆ
ಬೇಕಾದ ಪಿಪಿಇ ಕಿಟ್‌ಗಳನ್ನು ಆಂಬುಲೆನ್ಸ್‌ ಚಾಲಕರೇ ನೀಡಿ ಅಧಿಕ ಹಣ ಪಡೆಯುತ್ತಿದ್ದರು. ಹಾಗಾಗಿ, ನಾಲ್ಕು ಪಿಪಿಇ ಕಿಟ್‌ಗಳನ್ನು ಸರ್ಕಾರ ದಿಂದಲೇ ಉಚಿತವಾಗಿ ನೀಡಲಾಗುತ್ತಿದೆ. ಆ ಮೂಲಕ ಕಿಟ್‌ ಮಾರಾಟ ದಂಧೆಗೂ ಕಡಿವಾಣ ಹಾಕಲಾಗಿದೆ.

ಮುಂಗಡ ದರ ನಿಗದಿಯ ನಂತರ ಆಂಬುಲೆನ್ಸ್‌ ಮಾಲೀಕರು ಹಾಗೂ ಜಿಲ್ಲಾಡಳಿತದ ಮಧ್ಯೆ ಜಟಾಪಟಿ ಆರಂಭವಾಗಿದೆ. ನಿಗದಿತ ದರ ಸಾಕಾಗುವುದಿಲ್ಲ ಎಂದು ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲಾಡಳಿತ ಯಾವ ಒತ್ತಡಕ್ಕೂ ಮಣಿದಿಲ್ಲ.

ಮೆಗ್ಗಾನ್‌ ಆವರಣದಲ್ಲಿ 32 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ವಾಹನಗಳು ಸಂಚಾರ ಪರವಾನಗಿ ಪಡೆದಿದ್ದರೂ, ಆಂಬುಲೆನ್ಸ್‌ ಸೇವೆಯ ನೋಂದಣಿ ಮಾಡಿಸಿಲ್ಲ. ಆದರೂ, ಮಾನವೀಯ ದೃಷ್ಟಿಯಿಂದ ಅವುಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ. ದರ ನಿಗದಿಯ ನಂತರ ಜಟಾಪಟಿ ಆರಂಭವಾಗಿದ್ದು, ಅವುಗಳ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಮೆಗ್ಗಾನ್‌ ಆಸ್ಪತ್ರೆಯ ಮೃತದೇಹಗಳನ್ನು ಪ್ರತಿ ದಿನ ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಸಾಗಿಸಲಾಗುತ್ತದೆ. ಸಂಜೆ 5ರ ನಂತರ ಮೃತರಾಗುವವರ ಶವಗಳನ್ನು ಬೆಳಿಗ್ಗೆ 6ರಿಂದಲೇ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ದರ ನಿಗದಿ ಜಟಾಪಟಿಯ ನಂತರ ಗುರುವಾರ ಬೆಳಿಗ್ಗೆ ಎರಡು ಗಂಟೆ ಶವಗಳನ್ನು ಸಾಗಿಸಲು ಒಪ್ಪಿರಲಿಲ್ಲ. ಆರ್‌ಟಿಒ ಕಟು ಎಚ್ಚರಿಕೆಯ ನಂತರ ಶವಗಳ ಸಾಗಣೆ ಆರಂಭವಾಯಿತು. ಕೋವಿಡ್‌ನಿಂದ ಮೃತಪಟ್ಟವರೂ ಸೇರಿ ಶವಾಗಾರದಿಂದ ಪ್ರತಿ ದಿನ ಕನಿಷ್ಠ 20 ಶವಗಳ ಸಾಗಣೆ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.