ಗುರುವಾರ , ಡಿಸೆಂಬರ್ 8, 2022
18 °C
ಮುರುಘಾಮಠದಲ್ಲಿ ಬುಧವಾರ ನಡೆದ ಭಾವೈಕ್ಯ ಸಮ್ಮೇಳನದಲ್ಲಿ ಬಿ.ವೈ.ವಿಜಯೇಂದ್ರ ಅಭಿಮತ

ಜೀವನದ ಒಗಟು ಬಿಡಿಸಿದರೆ ಬದುಕು ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ‘ಜೀವನದ ಒಗಟು ಬಿಡಿಸಲಾಗದೆ ಯುವಕರು ಆತ್ಮಹತ್ಯೆ ಹಾದಿ ತುಳಿಯುತ್ತಿರುವುದು ಆತಂಕಕಾರಿ ವಿಷಯ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಆನಂದಪುರ ಸಮೀಪದ ಮುರುಘಾಮಠದಲ್ಲಿ ಬುಧವಾರ ನಡೆದ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ಸಮಸ್ಯೆ ಬಂದಾಗ ಬಗೆಹರಿಸಿಕೊಳ್ಳುವ ಮಾರ್ಗ ತಿಳಿಯದೆ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಕೂಡು ಕುಟುಂಬದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದುದರಿಂದ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆದರೆ, ಇಂದು ಸಮಸ್ಯೆಯಿಂದ ಹೇಗೆ ವಿಮುಕ್ತಿಗೊಳ್ಳಬಹುದು ಎಂಬ ಯೋಚನೆಯನ್ನು ಮಾಡದಿರುವುದೇ ಆತ್ಮಹತ್ಯೆಗೆ ಕಾರಣವಾಗಿದೆ’ ಎಂದು ಹೇಳಿದರು.

‘ಇಸ್ರೇಲ್ ದೇಶದ ಪತ್ರಿಕೆಗಳ ಮುಖಪುಟದಲ್ಲಿ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳ ಸಾಧನೆ, ಸನ್ಮಾನಿತರ ಸುದ್ದಿಗಳನ್ನು ಕಾಣಬಹುದು. ಆದರೆ ರಾಜ್ಯ, ದೇಶದ ಪತ್ರಿಕೆಗಳ ಮುಖಪುಟದಲ್ಲಿ ಕೊಲೆ, ಅತ್ಯಾಚಾರ, ದರೋಡೆ ಸುದ್ದಿಗಳನ್ನು ಕಾಣುವುದು ಬೆಸರದ ಸಂಗತಿ. ಅಂದರೆ ಮನುಷ್ಯ ಮನುಷ್ಯತ್ವವನ್ನು ಮರೆತು, ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತುವ ಮೂಲಕ ನೆಮ್ಮದಿ ಬದುಕು ನಡೆಸಲು ಅಸಾಧ್ಯವಾಗಿರುವುದು ದುರದೃಷ್ಟಕರ ಸಂಗತಿ’ ಎಂದು ಹೇಳಿದರು.

‘ಯಡಿಯೂರಪ್ಪ ಅವರನ್ನು ಕಟ್ಟಿಹಾಕಿದರೆ ಪಕ್ಷದ ಕೆಲಸ ಮುಗಿಯುತ್ತದೆ ಎನ್ನುವ ಕಾರಣಕ್ಕಾಗಿ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿದರು. ತಂದೆಯವರು ಯಾವುದೇ ತಪ್ಪು ಮಾಡದೆ ಇರುವುದರಿಂದ ಆರೋಪಗಳಿಂದ ಹೊರಬಂದು ಮತ್ತೆ ಮುಖ್ಯಮಂತ್ರಿಯಾಗಿದ್ದು ಶರಣರ ಆಶೀರ್ವಾದದಿಂದ’ ಎಂದು ಹೇಳಿದರು.

ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿದರು. ಸಾಲು ಮರದ ತಿಮ್ಮಕ್ಕ ಅವರಿಗೆ ‘ಕೆಳದಿ ರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸವಕಲ್ಯಾಣದ ಮಂಠಾಳಮಠದ ರಾಜಗುರು ನಿರಂಜನ ಚರಮೂರ್ತಿ ಸ್ವಾಮೀಜಿ ಬರೆದ ‘ಆರೋಗ್ಯಕ್ಕಾಗಿ ಆಯುರ್ವೇದ’ ಪುಸ್ತಕವನ್ನು ಬಿ.ವೈ.ವಿಜಯೇಂದ್ರ ಬಿಡುಗಡೆ ಮಾಡಿದರು.

ಸಮಾಜ ಸೇವಾ ಪ್ರಶಸ್ತಿಯನ್ನು ಎಚ್.ಎಂ.ಚಂದ್ರಶೇಖರಪ್ಪ, ಡಾ.ಜಿ.ಡಿ.ನಾರಾಯಣಪ್ಪ, ಎಸ್.ಎನ್. ರುದ್ರಮುನಿ ಸಜ್ಜನ್, ಆರ್.ವಿ. ಹೆಗಡೆ, ನಾಗರಾಜ್ ತೋಂಬ್ರಿ ಹಾಗೂ ರಂಗಮ್ಮ ಅವರಿಗೆ ನೀಡಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಗದಗದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಅಥಣಿಯ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ನೀಲಕಂಠ ಸ್ವಾಮೀಜಿ, ಆರ್.ಸಿ.ಜಗದೀಶ್, ಡಾ.ಧನಂಜಯ ಸರ್ಜಿ, ಎಲ್.ನಾಗರಾಜ್ ಶೆಟ್ಟಿ, ಬೇಸೂರು ಇಂದೂಧರ ಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.