ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ಹಿರಿಯ ವಿದ್ಯಾರ್ಥಿಗಳ ಶ್ರಮದಿಂದ ತಲಗಡ್ಡೆ ಶಾಲೆ ಚಿತ್ತಾಕರ್ಷಕ

ಶಾಲೆಯ ಸುತ್ತಲೂ ಅಡಿಕೆ, ಬಾಳೆ, ತೆಂಗು ಸೇರಿ 355 ವಿವಿಧ ಜಾತಿಯ ಮರಗಳು
Last Updated 9 ಫೆಬ್ರುವರಿ 2021, 0:55 IST
ಅಕ್ಷರ ಗಾತ್ರ

ಆನವಟ್ಟಿ: ಸಮೀಪದ ತಲಗಡ್ಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಐದು ತಿಂಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಶ್ರಮದೊಂದಿಗೆ ಶಿಕ್ಷಣ ಇಲಾಖೆ, ಪಿಡಿಒ ಶಿವರಾಜ್, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಚಿತ್ತಾರಗೊಂಡು ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ.

1962ರಲ್ಲಿ ಗ್ರಾಮದ ದೇವಸ್ಥಾನದಲ್ಲಿ ಶಾಲೆ ನಡೆಯುತ್ತಿತ್ತು. ನಂತರ ಊರ ಒಳಗೆ ಮೂರು ಕೊಠಡಿಯಲ್ಲಿ ಮಕ್ಕಳ ಕಲಿಕೆ ಆರಂಭವಾಯಿತು. ಗ್ರಾಮಸ್ಥರ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮದ ಹೊರಗೆ 4 ಎಕರೆ ವಿಸ್ತೀರ್ಣದಲ್ಲಿ 2011ರಲ್ಲಿ ಮೂರು ಕಟ್ಟಡ, 2017ರಲ್ಲಿ ಒಂದು ಕಟ್ಟಡ ಮತ್ತು 2019ರಲ್ಲಿ ಎರಡು ಕಟ್ಟಡಗಳು ಮಂಜೂರಾಗಿದ್ದು, ಒಟ್ಟು ಏಳು ಕೊಠಡಿಗಳನ್ನು ತಲಗಡ್ಡೆ ಸರ್ಕಾರಿ ಶಾಲೆ ಹೊಂದಿದೆ. 1ರಿಂದ 7ನೇ ತರಗತಿಯವರೆಗೆ 168 ವಿದ್ಯಾರ್ಥಿಗಳು ಅಭ್ಯಾಸ
ಮಾಡುತ್ತಿದ್ದಾರೆ.

ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಶ್ರಮವಹಿಸಿ, ಕೈತೋಟ ನಿರ್ಮಾಣ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗೇಗೌಡ ತಮ್ಮ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೈತೋಟದಲ್ಲಿ ವಿವಿಧ ಔಷಧೀಯ ಸಸ್ಯಗಳು, ಶಾಲೆಯ ಸುತ್ತಲೂ ಅಡಿಕೆ, ಬಾಳೆ, ತೆಂಗು ಹಾಗೂ 355 ವಿವಿಧ ಜಾತಿಯ ಮರಗಳ ಜೊತೆಗೆ ಶಾಲೆಯ ಮುಂಭಾಗದಲ್ಲಿ ವಿವಿಧ ಸುಂದರ ಗಿಡಗಳು
ನಳನಳಿಸುತ್ತಿವೆ.

ಹೊಸ ಮೆರುಗು ನೀಡಿದ ಚಿತ್ರಕಲೆ: ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಅನುದಾನದಲ್ಲಿ ಮೂರು ಕೊಠಡಿಗಳಿಗೆ ರೈಲಿನ ಚಿತ್ತಾರ ಬಿಡಿಸಲಾಗಿದೆ. ಉಳಿದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಎರಡು ಕೊಠಡಿಗಳಿಗೆ ರಾಜ್ಯ ಸಾರಿಗೆ ಬಸ್‍ನ ಚಿತ್ತಾರವನ್ನು ಹಿರಿಯ ವಿದ್ಯಾರ್ಥಿಗಳು ಸ್ವಂತ ಹಣದಲ್ಲಿ ಚಿತ್ರಿಸಿಕೊಟ್ಟಿದ್ದಾರೆ. ಒಂದು ಕೊಠಡಿಯ ಎಲ್ಲ ಗೋಡೆಗಳ ಮೇಲೆ ಶಿವಕುಮಾರ ಶಿವನಾಗಪ್ಪ ಜಾನಪ್ಪನವರ್ (ಬೆಂಗಳೂರು) ಪ್ರಾಕೃತಿಕ ಚಿತ್ರಕಲೆ ಬಿಡಿಸಲು ತಗಲುವ ವೆಚ್ಚವನ್ನು ನೀಡಿದ್ದಾರೆ. ಸರ್ಕಾರಿ ಶಾಲೆಗೆ ಕೇವಲ ಸರ್ಕಾರದ ಅನುದಾನ ನೀಡುವುದನ್ನೇ ಕಾಯುವ ಬದಲು ಎಲ್ಲರೂ ಕೈಜೊಡಿಸಿದರೆ ನಮ್ಮ ಊರ ಶಾಲೆಯನ್ನು ನಾವೇ ಅಭಿವೃದ್ಧಿ ಮಾಡಿಕೊಳ್ಳಬಹುದು ಎಂಬುವುದುನ್ನು ತೋರಿಸಿಕೊಟ್ಟಿದ್ದಾರೆ.

ರೈಲು, ಬಸ್ಸು ಹಾಗೂ ಪ್ರಕೃತಿಯ ಚಿತ್ರಕಲೆಯು ಶಾಲೆಗೆ ಹೊಸ ಮೆರುಗು ನೀಡಿದೆ. ಮಕ್ಕಳಿಗೆ ಶಾಲೆಗೆ ಬರಲು ಹೊಸ ಆಕರ್ಷಣೆಯಾಗಿದೆ. ಶಾಲಾ ಮಕ್ಕಳಿಗೆ ಪ್ರಾರ್ಥನಾ ಮಂದಿರವನ್ನು ತಾಲ್ಲೂಕು ಪಂಚಾಯಿತಿ ಸದಸ್ಯೆ ಅಂಜಲಿ ಸಂಜೀವ ಅವರು ತಮ್ಮ ಅನುದಾನದಲ್ಲಿ ನಿರ್ಮಿಸಿಕೊಟ್ಟಿದ್ದಾರೆ.

ಶಾಲೆಯು ಎಲ್ಲರ ನೆರವಿನಿಂದ ಅಭಿವೃದ್ಧಿಯಾಗಿದ್ದರೂ, ಸುತ್ತಲೂ ಕಾಂಪೌಂಡ್ ಬೇಕು. ಮಕ್ಕಳ ಕ್ರೀಡಾಕೂಟ ನಡೆಸಲು ಕ್ರೀಡಾಂಗಣ ನಿರ್ಮಿಸಬೇಕು. ಅಕ್ಷರದಾಸೋಹದ ಕೊಠಡಿಗಳು ಬೇಕಾಗಿದ್ದು, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು, ಹಾಗೂ ಸಚಿವರು ಇವುಗಳನ್ನು ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಎಸ್‍ಡಿಎಂಸಿ ಅಧ್ಯಕ್ಷ ಇರ್ಷಾದ್ ಮನವಿ ಮಾಡಿದರು.

ಇನ್ನಷ್ಟು ನೆರವು ನೀಡಲು ಮನವಿ
ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವನ್ನು ನಾವು ಕಲಿತ ಶಾಲೆಗೆ ನೀಡಲು ಸಿದ್ಧರಿದ್ದೇವೆ. ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಲ್ಲ ಹಂತದ ಜನಪ್ರತಿನಿಧಿಗಳು, ಹಳೆಯ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರು, ಸಹಶಿಕ್ಷಕರು ಮತ್ತು ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಶಾಲೆಯು ಸುಂದರವಾಗಿದೆ.
-ಎಲ್. ಕೃಷ್ಣಾನಾಯ್ಕ, ಬಡ್ತಿ ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT