ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ: ಬಿಳ್ಳೋಡಿಯಲ್ಲಿ ಸಾಂತರ ಕಾಲದ ಶಾಸನ ಪತ್ತೆ

Published 31 ಮೇ 2024, 23:52 IST
Last Updated 31 ಮೇ 2024, 23:52 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ಬಿಳ್ಳೊಡಿ ಗ್ರಾಮದಲ್ಲಿ ಕ್ರಿ.ಶ. 1087ರಲ್ಲಿ ಸಾಂತರ ದೊರೆ ವಿಕ್ರಮ ಸಾಂತರನು ತನ್ನ ಅಣ್ಣ ಹಾಗೂ ಶಾಂತರ ದೊರೆಗಳಲ್ಲೇ ಪ್ರಖ್ಯಾತನಾದ ನನ್ನಿಯ ಸಾಂತರನ ಪರೋಕ್ಷ ವಿನಯಕ್ಕಾಗಿ ಅಜಿತ ಸೇನಾ ಪಂಡಿತರಿಗೆ ಕಟ್ಟಿಸಿದ ಶಾಲೆಯ ಕಟ್ಟಡ ಪತ್ತೆಯಾಗಿದೆ.

ಇತಿಹಾಸ ಸಂಶೋಧಕರಾದ ರಮೇಶ್ ಬಿ.ಹಿರೇಜಂಬೂರು ಅವರು ತಮ್ಮ ಕ್ಷೇತ್ರ ಕಾರ್ಯದಲ್ಲಿ ಸಾಂತರರ ಈ ನೆಲೆಯನ್ನು ಪತ್ತೆ ಮಾಡಿದ್ದಾರೆ.

ನನ್ನಿಯ ಸಾಂತರನು ಮರಣಿಸಿದಾಗ ಆತನ ಸ್ಮರಣಾರ್ಥ ಜೈನ ಮುನಿಗಳಾದ ಅಜಿತ ಸೇನಾ ಪಂಡಿತರ ಧರ್ಮ ಕಾರ್ಯಗಳಿಗೆ ಪೂರಕವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ. ಈ ಕಟ್ಟಡದ ಮುಂಭಾಗದ ಎರಡೂ ಬದಿಗಳಲ್ಲಿ ನನ್ನಿಯ ಸಾಂತರನ ಜೀವನದ ವಿಶೇಷತೆಗಳನ್ನು ಚಿತ್ರಗಳ ರೂಪದಲ್ಲಿ ಕೆತ್ತಲಾಗಿದೆ. ಈ ಕಟ್ಟಡದ ಬಾಗಿಲುವಾಡಿಯ ಮೇಲ್ಭಾಗದಲ್ಲಿ ಮತ್ತು ಬಾಗಿಲಿನ ತೋಳುಗಳ ಕೆಳಭಾಗದ ತೊಲೆಗಳಲ್ಲಿ ವಿಕ್ರಮ ಸಾಂತರನ ಅವಧಿಯ ಶಾಸನ ಪಾಠಗಳನ್ನು ಕೆತ್ತಲಾಗಿದೆ.

ಎಡಭಾಗದ ಪಟ್ಟಿಕೆಯಲ್ಲಿ ನನ್ನಿಯ ಸಾಂತರನ ಆಡಳಿತ, ಮಲ್ಲಯುದ್ಧ, ಜಯದ ಮೆರವಣಿಗೆಗಳು, ಗಜ ಪಡೆಯೊಂದಿಗಿನ ಹೋರಾಟಗಳ ಚಿತ್ರಗಳನ್ನು ಕೆತ್ತಲಾಗಿದೆ. ಬಲಭಾಗದ ಪಟ್ಟಿಕೆಯಲ್ಲಿ ಆತನ ಸಹೋದರ ಬರ್ಮ ಸಾಂತರನು ಸನ್ಯಾಸ ವ್ರತವನ್ನು ಸ್ವೀಕರಿಸುತ್ತಿರುವ ವಿವಿಧ ಹಂತಗಳ ಚಿತ್ರಗಳನ್ನು ಕೆತ್ತಲಾಗಿದೆ.

‘ಶಾಸನವು ಕಟ್ಟಡದ ಮುಂಭಾಗದ ವಿವಿಧ ಹಂತಗಳಲ್ಲಿ ಖಂಡರಿಸಿದ್ದು, ಕಟ್ಟಡದ ಭಾಗಗಳು ಕಳಚಿ ಬಿದ್ದಿವೆ. ಅವುಗಳು ಚದುರಿ ಹೋಗಿವೆ. ಬಿಡಿಯಾಗಿ ಶಾಸನ ಪಾಠ ಪಡೆದು ಅಧ್ಯಯನಕ್ಕೊಳಪಡಿಸಲಾಗಿದೆ. ಶಾಸನಗಳಿರುವ ಒಟ್ಟು ಏಳು ಶಿಲಾ ಭಾಗಗಳು ದೊರೆತಿವೆ’ ಎಂದು ರಮೇಶ್ ಬಿ.ಹಿರೇಜಂಬೂರು ತಿಳಿಸಿದರು.

ಈ ಕಟ್ಟಡದ ಗರ್ಭ ಭಾಗದಲ್ಲಿ ಪೀಠ ಇದ್ದು ಯಾವುದೇ ಶಿಲ್ಪಗಳು ಕಂಡುಬಂದಿಲ್ಲ. ಮರಗಳು ಬೆಳೆದು ಕಟ್ಟಡವು ಶಿಥಿಲಾವಸ್ಥೆ ತಲುಪಿದೆ. ಸ್ಥಳೀಯರು ಆಸಕ್ತಿ ವಹಿಸಿ ಅಧ್ಯಯನಕ್ಕೆಂದು ಸಂಶೋಧಕರನ್ನು ಕರೆದು ಸ್ವಚ್ಛಗೊಳಿಸಿ ನೋಡಿದಾಗ ಇದರ ಇತಿಹಾಸ ದೊರೆತಿದೆ.

ಇವುಗಳ ಸನಿಹದಲ್ಲೇ ಎರಡು ವೀರಗಲ್ಲು ದೊರಕಿದ್ದು, ಇದು ಕ್ರಿ.ಶ. 1124ರ ಅವಧಿಯದ್ದಾಗಿದೆ.

ಸಂಶೋಧನೆಯಲ್ಲಿ ಬಿಳ್ಳೊಡಿ ಗ್ರಾಮದ ಆದಿತ್ಯ ಗೌಡ, ರತ್ನಾಕರ ಗೌಡ, ಪ್ರಕಾಶ ರಾಜಪ್ಪಗೌಡ, ವಿನಾಯಕ ಭಟ್ ಮತ್ತು ಭಾಸ್ಕರ್ ಗೌಡ ಇದ್ದರು.

ಶಾಸನಗಳ ಅಧ್ಯಯನಕ್ಕೆ ಜಗದೀಶ್ ಅಗಸಿಬಾಗಿಲು, ಎಂ.ಜಿ.ಮಂಜುನಾಥ, ಶೇಜೇಶ್ವರ್ ನಾಯ್ಕ ಮತ್ತು ಮಂಜಪ್ಪ ಚುರ್ಚಿಗುಂಡಿ ಮಾರ್ಗದರ್ಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT