ಮಂಗಳವಾರ, ಮೇ 17, 2022
23 °C

ನ. 26ಕ್ಕೆ ರೈತ ಚಳವಳಿಯ ವರ್ಷಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿ ಕಾಯ್ದೆಯ ವಿರುದ್ಧ ರೈತರ ಚಳವಳಿಯು ನ. 26ಕ್ಕೆ ವರ್ಷ ಪೂರೈಸುತ್ತಿದ್ದು, ಅಂದು ಕಾಯ್ದೆ ವಿರುದ್ಧ ಪ್ರತಿಭಟಿಸುವ ಮೂಲಕ ರೈತ ಚಳವಳಿಯ ವರ್ಷಾಚರಣೆಯನ್ನು ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಹೇಳಿದರು.

ಇಡೀ ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ಸುಗ್ರೀವಾಜ್ಞೆಗಳ ಮೂಲಕ ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ತನ್ನ ಹೊಣೆಗೇಡಿತನವನ್ನು ಪ್ರದರ್ಶಿಸಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸತ್ಯಾಗ್ರಹ ಒಂದು ವರ್ಷ ಪೂರೈಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.26ರಂದು ನಡೆಯಲಿರುವ  ರೈತ ಚಳವಳಿಯ ವರ್ಷಾಚರಣೆಯಲ್ಲಿ ಶಿವಮೊಗ್ಗದ ಎಂಆರ್‌ಎಸ್ ವೃತ್ತದಲ್ಲಿ ಮಧ್ಯಾಹ್ನ 12ಕ್ಕೆ ಜಿಲ್ಲೆಯ ರೈತರು ಜಾನುವಾರು, ಟ್ರ್ಯಾಕ್ಟರ್, ಟಿಲ್ಲರ್, ದವಸ ಧಾನ್ಯದೊಂದಿಗೆ ಚಳವಳಿಯಲ್ಲಿ ಭಾಗವಹಿಸಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಬಿಜೆಪಿ ಜನ ವಿರೋಧಿ ಸರ್ಕಾರ: ರೈತರ ಸತ್ಯಾಗ್ರಹ ಆರಂಭವಾದ ದಿನದಿಂದಲೂ ಕೇಂದ್ರ ಸರ್ಕಾರ ಸತ್ಯಾಗ್ರಹವನ್ನು ದಿಕ್ಕು ತಪ್ಪಿಸಲು ಯತ್ನಿಸಿದೆ. ಸತ್ಯಾಗ್ರಹ ನಡೆಸುವ ಸ್ಥಳದ ಸುತ್ತಲೂ ದೊಡ್ಡ ದೊಡ್ಡ ಕಂದಕಗಳನ್ನು ತೆಗೆಯಲಾಯಿತು. ಸತ್ಯಾಗ್ರಹಿಗಳು ಭಾಗವಹಿಸದಂತೆ ರಸ್ತೆಗೆ ಮೊಳೆಗಳನ್ನು ಹೊಡೆಯಲಾಯಿತು. ಶಾಂತಿಯುತವಾಗಿ ನಡೆಸುತ್ತಿದ್ದ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್‌ ಅನ್ನು ದಿಕ್ಕುತಪ್ಪಿಸಿ, ರೈತ ಸತ್ಯಾಗ್ರಹಿಗಳಿಗೆ ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಲಾಯಿತು. ಪೋಲಿಸರಿಂದ ಸತ್ಯಾಗ್ರಹ ಹತ್ತಿಕ್ಕಲು ಲಾಠಿ ಪ್ರಹಾರ ನಡೆಸಿ ಗೂಂಡಾ ವರ್ತನೆ ಪ್ರದರ್ಶಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಮುಖ್ಯಸ್ಥರ ಮಕ್ಕಳ ಮೂಲಕ ಸತ್ಯಾಗ್ರಹಿಗಳ ಮೇಲೆ ಕಾರು ಹರಿಸಿ, ಕೊಲೆ ಮಾಡಿಸಿ ಹೇಯ ಕೃತ್ಯ ಪ್ರದರ್ಶಿಸಿತು. ಈ ಎಲ್ಲಾ ಕೃತ್ಯಗಳನ್ನು ಖಂಡಿಸಿ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆದರೂ ಎಚ್ಚೆತ್ತುಕೊಳ್ಳದಿರುವುದನ್ನು ಗಮನಿಸಿದರೆ ಸಂವಿಧಾನ ವಿರೋಧಿ ಸರ್ಕಾರ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಆರ್. ಸಣ್ಣರಂಗಪ್ಪ, ಜಗದೀಶ್‌ ನಾಯಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು