ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಚಳವಳಿ ಸಿಂಹಾವಲೋಕನ ಅಗತ್ಯ: ಸಚಿವ ಆರಗ ಜ್ಞಾನೇಂದ್ರ

ಐತಿಹಾಸಿಕ ಬಿದನೂರು ಕೋಟೆಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ
Last Updated 29 ಮೇ 2022, 5:01 IST
ಅಕ್ಷರ ಗಾತ್ರ

ಹೊಸನಗರ: ಭಾರತ ದೇಶದ ದಾಸ್ಯದ ಸಂಕೋಲೆ ಕಳಚಿ ಮುಕ್ಕಾಲು ಶತಮಾನ ಕಳೆದಿದೆ. ಇದೀಗ ದೇಶ ನಡೆದು ಬಂದ ದಾರಿ, ಸ್ವಾತಂತ್ರ್ಯ ಪಡೆಯುವಲ್ಲಿನ ಸಂಕಷ್ಟಗಳು, ಪ್ರಾಣ ಪಣವಾಗಿಟ್ಟು ಹೋರಾಡಿದ ಧೀಮಂತ ನಾಯಕರು ಮತ್ತಿತರ ವಿಚಾರದ ಬಗ್ಗೆ ಸಿಂಹಾಲೋಕನದ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿದನೂರು ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮೂಡುಗೊಪ್ಪ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟಗಾರರ ಋಣದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಎರಡು ರೀತಿಯ ಹೋರಾಟ ನಡೆಯುತ್ತದೆ. ಮಹಾತ್ಮ ಗಾಂಧಿ ಅವರ ಅಹಿಂಸಾತ್ಮಕ ಹೋರಾಟ ಸಾವಿರಾರು ಮಂದಿಯನ್ನು ಆಕರ್ಷಿಸಿತು. ಮತ್ತೊಂದು ಮಗ್ಗುಲಲ್ಲಿ ಶಾಂತಿಯಿಂದ ಸ್ವಾತಂತ್ರ್ಯಸಿಕ್ಕದು. ಕ್ರಾಂತಿಯ ಕಿಡಿಯಿಂದ ಮಾತ್ರ ಸಾಧ್ಯ ಎಂದು ನೇಣುಗಂಬ ಏರಿದರು. ಸಾವಿಗೆ ಅಂಜದೆ ದೇಶಕ್ಕಾಗಿ ಜೀವವನ್ನು ಬಲಿಕೊಟ್ಟವರ ಸಂಖ್ಯೆ ಕೂಡ ಹೆಚ್ಚಿದೆ’ ಎಂದರು.

‘ಇಂದು ವೀರ ಸಾವರ್ಕರ್ ಅವರ ಜನ್ಮದಿನ. ಸಾವರ್ಕರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರು ಇದ್ದಾರೆ. ಆದರೆ, ಸಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರಂತಹವರು ವಿರಳ’ ಎಂದು ಹೇಳಿದರು.

ಪತ್ರಕರ್ತ ಸಂತೋಷ ತಮ್ಮಯ್ಯ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಲಕ್ಷ್ಮಿ
ಪ್ರಸಾದ್, ಸಾಗರ ಉಪವಿಭಾಗಾಧಿಕಾರಿ ಡಾ.ಎಲ್. ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರಶೆಟ್ಟಿ, ರಂಗಾಯಣ ಅಧ್ಯಕ್ಷ ಸಂದೇಶ ಜವಳಿ, ತಹಶೀಲ್ದಾರ್ ವಿ.ಎಸ್. ರಾಜೀವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಇಲಾಖಾಧಿಕಾರಿಗಳು ಇದ್ದರು.

ಮೆರವಣಿಗೆ
ದಿಲ್ಲಿ ಬಾಗಿಲಿನಿಂದ ಬಿದನೂರು ಕೋಟೆ ಬಾಗಿಲವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಚಂಡೆ ವಾದನ, ನಗಾರಿ ವಾದನ, ಸೇರಿ ಸ್ಥಳೀಯ ಶಾಲಾ ಮಕ್ಕಳ ಛದ್ಮವೇಶ ಎಲ್ಲರ ಗಮನ ಸೆಳೆಯಿತು. ಸಾಸ್ವೆಹಳ್ಳಿ ಸತೀಶ್ ನಿರ್ದೇಶದಲ್ಲಿ ‘ಏಸೂರ ಕೊಟ್ಟರೂ ಈಸೂರ ಬಿಡೆವು’ ನಾಟಕ ಪ್ರದರ್ಶನಗೊಂಡಿತು. ರಾಷ್ಟ್ರಗೀತೆ, ನಾಡಗೀತೆಗಳನ್ನು ಮೊಳಗಿಸಲಾಯಿತು.

ಪೂರ್ವ ಸಿದ್ಧತೆ ಕೊರತೆ
ಅಮೃತಭಾರತಿಗೆ ಕನ್ನಡದಾರತಿ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ನಡೆಯಿತು. ಕಾರ್ಯಕ್ರಮದ ಪೂರ್ವಸಿದ್ಧತೆ ಇರದ ಕಾರಣ ಸಭಾ ಕಾರ್ಯಕ್ರಮ, ಊಟ ಉಪಚಾರ ವಿಚಾರದಲ್ಲಿ ಗೊಂದಲ ಕಂಡು ಬಂತು. ಅಲ್ಲದೇ ಹೊರರಾಜ್ಯ ಸೇರಿ 150ಕ್ಕೂ ಹೆಚ್ಚು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕರ್ತರು, ಸ್ಥಳೀಯ ಶಾಲಾ ಮಕ್ಕಳು ಹೊರತು ಪಡಿಸಿದರೆ ಸ್ಥಳೀಯರ ಭಾಗವಹಿಸುವಿಕೆ ವಿರಳವಾಗಿತ್ತು. ಅದರಲ್ಲೂ ಕೋಟೆ ಆವರಣದಲ್ಲಿ ಶಾಮಿಯಾನ ಹಾಕಿ ಕಾರ್ಯಕ್ರಮ ಮಾಡಿದ್ದರಿಂದ ವೇದಿಕೆಯು ಕೋಟೆ ಸೊಬಗು ಸೆಳೆಯುವಲ್ಲಿ ವಿಫಲವಾಯಿತು.

ಸೆಲ್ಫಿ, ಡ್ಯಾನ್ಸ್: ಕಾರ್ಯಕ್ರಮಕ್ಕೆ ಬಂದ ಬಹುತೇಕರು ಹೊರಗಡೆಯವರಾಗಿದ್ದರಿಂದ ಕೋಟೆ ಸುತ್ತುತ್ತಾ, ಅಲ್ಲಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸಿದ್ದು ಕಂಡು ಬಂತು. ಯಾರೂ ಕಾರ್ಯಕ್ರಮದತ್ತ ಸುಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT