ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನೇಂದ್ರ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ಗಳಿಲ್ಲದೇ ಪರದಾಟ

15 ವರ್ಷಗಳಿಂದ ಸ್ಕ್ಯಾನಿಂಗ್‌ ಯಂತ್ರಕ್ಕೆ ದೂಳು
Last Updated 28 ಮಾರ್ಚ್ 2022, 2:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರ ತಾಲ್ಲೂಕು ಆಸ್ಪತ್ರೆಯಲ್ಲಿ ನುರಿತ ತಜ್ಞರಿಲ್ಲ. ಬಡ ರೋಗಿಗಳು ಹೆಚ್ಚಿನ ಸೌಲಭ್ಯಗಳಿಗೆ ಖಾಸಗಿ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯ ಎದುರಾಗಿದೆ.

ಸಮುದಾಯ ಆರೋಗ್ಯ ಕೇಂದ್ರ ವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್‌ ದೂರದಲ್ಲಿದ್ದು, 100 ಹಾಸಿಗೆಗೆ ಮೇಲ್ದರ್ಜೆಗೇರಿದ್ದ ಜಯಚಾಮರಾಜೇಂದ್ರ ಆಸ್ಪತ್ರೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ ಹೆಚ್ಚಿದ್ದರೂ ಕೆಲವು ವಿಭಾಗಗಳಲ್ಲಿ ಸೇವೆ ಸಿಗುತ್ತಿಲ್ಲ. ಅತಿ ಹೆಚ್ಚು ಅವಶ್ಯಕತೆ ಇರುವ ಸ್ಕ್ಯಾನಿಂಗ್ ಸೌಲಭ್ಯ ರೇಡಿಯಾಲಜಿಸ್ಟ್ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ.

ಉಚಿತ ಚಿಕಿತ್ಸೆಗಾಗಿ ಬಡ ರೋಗಿಗಳು ಆಸ್ಪತ್ರೆಗೆ ಬಂದರೆ ಸ್ಕ್ಯಾನಿಂಗ್‌ ಇಲ್ಲದ ಕಾರಣ 3 – 4 ದಿನ ಖಾಸಗಿ ಆಸ್ಪತ್ರೆ ಬಾಗಿಲು ಕಾಯಬೇಕು. ಈಗಿರುವ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಬಹಳಷ್ಟು ಆಂತರಿಕ ಸಮಸ್ಯೆಗಳಿಂದ ಗುಣಮಟ್ಟದ ಔಷಧೋಪಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸೂತಿಗೆಂದು ಬರುವ ತುಂಬು ಗರ್ಭಿಣಿಯರು ಪರದಾಡುವಂತಾಗಿದೆ.

ತಾಲ್ಲೂಕು ಆಸ್ಪತ್ರೆಯ ಉತ್ತಮ ಸೇವೆಯನ್ನು ಗಮನಿಸಿ ಶೃಂಗೇರಿ, ಕೊಪ್ಪ, ಹೊಸನಗರ, ಎನ್‌.ಆರ್‌ ಪುರ, ಬಾಳೆಹೊನ್ನೂರು ಭಾಗದಿಂದ ಚಿಕಿತ್ಸೆಗೆ ಬರುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಶಿವಮೊಗ್ಗ, ಮಣಿಪಾಲಕ್ಕೆ ತೆರಳಬೇಕಾಗಿದೆ.

ಸೇವೆಯಿಂದ ಜಾರಿಕೊಂಡ ವೈದ್ಯ: ಸ್ಕ್ಯಾನಿಂಗ್‌ ವಿಭಾಗಕ್ಕೆ ವಿಕಿರಣಶಾಸ್ತ್ರಜ್ಞರೊಬ್ಬರು ನೇಮಕ ಗೊಂಡಿದ್ದಾರೆ. ಇವರು ಸರ್ಕಾರದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ನೇಮಕವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಖಾಸಗಿಯಾಗಿ ಓದಿರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ’ ಎಂಬ ವಾದವನ್ನು ನ್ಯಾಯಾಲಯದಲ್ಲಿ ಇರಿಸಲಾಗಿದೆ.

ದಾನಿಗಳಿಗೂ ಕೈಕಟ್ಟು: ಹೊಸ ಸ್ಕ್ಯಾನಿಂಗ್ಯಂತ್ರ ನೀಡಲು ಅನೇಕ ದಾನಿಗಳು ಸಿದ್ಧರಿದ್ದಾರೆ. ಆದರೆ ವೈದ್ಯರಿಲ್ಲ ಎಂಬ ಕಾರಣಕ್ಕೆ
ವಿಭಾಗ ಆರಂಭವಾಗುತ್ತಿಲ್ಲ. ಫಿಜಿಯೋಥೆರಪಿಸ್ಟ್‌ ಸಹಾಯಕರ ತಜ್ಞರಿಗೆ ಬೇಡಿಕೆ ಇದೆ. ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ವಂಕಿಧಾರಣೆ, ನುಂಗುವ ಮಾತ್ರೆ, ನಿರೋಧ್‌ ಪೂರೈಕೆ, ಕುಷ್ಠರೋಗ, ಹೊಸ ರೋಗಿಗಳ ಪತ್ತೆ, ಕಫ ಪರೀಕ್ಷೆ, ಕ್ಷಯ ರೋಗ ಪತ್ತೆ, ಮಲೇರಿಯಾ, ರಕ್ತ ಪರೀಕ್ಷೆ, ರೋಗ ಪತ್ತೆ, ಡೆಂಗಿ, ಇಲಿ ಜ್ವರ, ಕೆಎಫ್‌ಡಿ ರೋಗಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವಿಭಾಗ ಅತ್ಯವಶ್ಯಕ. ಸುಮಾರು 2 ಲಕ್ಷ ಜನಸಂಖ್ಯೆಗೆ ಉತ್ತಮ ಆರೋಗ್ಯ ಕೇಂದ್ರ ಲಭ್ಯವಾಗದಂತಾಗಿದೆ.

ತೀರ್ಥಹಳ್ಳಿ ತಾಲ್ಲೂಕು ಜೆಸಿ ಆಸ್ಪತ್ರೆಗೆ 15 ವರ್ಷಗಳ ಹಿಂದೆ ಬಂದಿರುವ ಸ್ಕ್ಯಾನಿಂಗ್ ಯಂತ್ರ ತಜ್ಞರಿಲ್ಲದೆ ದೂಳು ಹಿಡಿಯುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT