ಮಂಗಳವಾರ, ಜೂನ್ 28, 2022
25 °C
ಹುಣಸೋಡು ಸ್ಫೋಟದ ನಂತರ ಹಳಿಗೆ ಮರಳಿದ ಅಧಿಕೃತ ಕ್ವಾರಿಗಳು, ಕ್ರಷರ್‌ಗಳು

ಶಿವಮೊಗ್ಗ: ಜಿಲ್ಲೆಯ ಜಲ್ಲಿಕಲ್ಲು ಬೇಡಿಕೆಗೆ ನೆರೆ ಜಿಲ್ಲೆಗಳ ಸಾಥ್‌

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹುಣಸೋಡು ಸ್ಫೋಟದ ನಂತರ ಪರವಾನಗಿ ಪಡೆಯಲು ಸುತ್ತಲ ಕಲ್ಲುಕ್ವಾರಿಗಳ ಮಾಲೀಕರು ಹರಸಾಹಸ ಪಡುತ್ತಿರುವ ಮಧ್ಯೆಯೇ ಜಿಲ್ಲೆಯ ದೊಡ್ಡ ಪ್ರಮಾಣದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಜಲ್ಲಿ, ಕೃತಕ ಮರಳಿನ (ಎಂ. ಸ್ಯಾಂಡ್‌) ಬೇಡಿಕೆಯನ್ನು ಸುತ್ತಲಿನ ಜಿಲ್ಲೆಗಳು ಪೂರೈಸುತ್ತಿವೆ.

ಹುಣಸೋಡು ಸ್ಫೋಟದ ನಂತರ ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಕಲ್ಲುಗಂಗೂರು, ದೇವಕಾತಿಕೊಪ್ಪ ಪ್ರದೇಶದ ಕ್ವಾರಿ, ಕ್ರಷರ್‌ಗಳು ಸ್ಥಗಿತವಾಗಿದ್ದರೂ ಜಿಲ್ಲೆಯಲ್ಲಿ ಪ್ರಸ್ತುತ 72 ಅಧಿಕೃತ ಪರವಾನಗಿ ಪಡೆದ ಕ್ವಾರಿಗಳು, 95 ಜಲ್ಲಿ ಕ್ರಷರ್‌ಗಳಿಂದ ವಾರ್ಷಿಕ ಸರಾಸರಿ 9 ಲಕ್ಷ ಮೆಟ್ರಿಕ್‌ ಟನ್‌ ಜಲ್ಲಿ, ಕೃತಕ ಮರಳು ಉತ್ಪಾದಿಸಲಾಗುತ್ತಿದೆ. ಗಣಿಗಾರಿಕೆಗಾಗಿಯೇ ಜಿಲ್ಲೆಯಲ್ಲಿ 72.28 ಎಕರೆ ಪ್ರದೇಶ ಮೀಸಲಿಡಲಾಗಿದೆ. ರಸ್ತೆ, ಹೆದ್ದಾರಿ ಕಾಮಗಾರಿಗಳು, ರೈಲ್ವೆ ಸೇತುವೆಗಳು, ವಿಮಾನನಿಲ್ದಾಣ, ಸ್ಮಾರ್ಟ್‌ ಸಿಟಿ ಕಾಮಗಾರಿಗಳು, ಗೃಹ, ಕಟ್ಟಡ ನಿರ್ಮಾಣ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 13 ಮೆಟ್ರಿಕ್‌ ಟನ್‌ ಜಲ್ಲಿ, ಕೃತಕ ಮರಳಿನ ಅಗತ್ಯವಿದೆ. ಕೊರತೆ ಬೀಳುವ ಸಾಮಗ್ರಿಗಳನ್ನು ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಹಾಸನ, ಚಿತ್ರದುರ್ಗ ಜಿಲ್ಲೆಗಳು ಪೂರೈಸುತ್ತಿವೆ.

ಶಿವಮೊಗ್ಗ, ಭದ್ರಾವತಿ, ಹೊಸನಗರ ತಾಲ್ಲೂಕು ಸೇರಿ ಜಿಲ್ಲೆಯ ವಿವಿಧೆಡೆ 150ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದವು. ಬಹುತೇಕ ಕ್ರಷರ್‌ ಮಾಲೀಕರು ಕ್ರಷರ್‌ಗಳು ಕಾರ್ಯನಿರ್ವಹಿಸುವ ಸ್ಥಳದಲ್ಲೇ ಅನಧಿಕೃತವಾಗಿ ಕ್ವಾರಿಗಳನ್ನು ಮಾಡಿಕೊಂಡು ಕಲ್ಲು ತೆಗೆಯುತ್ತ ಬಂದಿದ್ದರು. ಹುಣಸೋಡು ಸ್ಫೋಟದ ನಂತರ ಎಲ್ಲ ಅನಧಿಕೃತ ಕ್ವಾರಿಗಳನ್ನು ಮುಚ್ಚಿಸಲಾಗಿತ್ತು. ಪರವಾನಗಿ ಪಡೆದ ಕ್ವಾರಿಗಳ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಮತ್ತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು.

ಹಲವು ವರ್ಷಗಳಿಂದ ಅನಧಿಕೃತ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿರಲಿಲ್ಲ. ಕೆಲವು ಬಾರಿ ಕ್ವಾರಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿದರೂ, ಕೆಲವರು ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ಅದರಲ್ಲೂ ವಿನಾಯಿತಿ ಪಡೆಯುತ್ತಿದ್ದರು. ಹುಣಸೋಡು ಸ್ಫೋಟದ ನಂತರ ಮೊದಲ ಬಾರಿ ಅಕ್ರಮ ಗಣಿಗಾರಿಕೆ ವಿರುದ್ಧ ಅತ್ಯಂತ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಊರುಗಡೂರು, ಕಲ್ಲಗಂಗೂರು, ಮತ್ತೂರು, ಭದ್ರಾವತಿ ಭಾಗ, ಪಶ್ಚಿಮ ಘಟ್ಟದ ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಕಲ್ಲು ಗಣಿಗಾರಿಗೆ ನಿರಂತರವಾಗಿ ನಡೆಯುತ್ತಿದೆ. ಹಲವು ವರ್ಷ
ಗಳಿಂದ ನಡೆಯುತ್ತಿದ್ದ ಈ ಕ್ವಾರಿಗಳಲ್ಲಿ ಭಾರಿ ಆಳದವರೆಗೆ ಕಲ್ಲುಗಳನ್ನು ತೆಗೆಯಲಾಗಿದೆ. ಒಂದೊಂದು ಕ್ವಾರಿಯೂ ನೂರಾರು ಅಡಿ ಆಳ, ಅಗಲದ ಕಂದಕಗಳಾಗಿವೆ. 

ಪರವಾನಗಿ ಪಡೆಯಲು ಪರಿಸರ ಸೂಕ್ಷ್ಮ ವಲಯ ಅಡ್ಡಿ:

ಹುಣಸೋಡು ಸ್ಫೋಟದ ನಂತರ ಅನಧಿಕೃತ ಕ್ವಾರಿ, ಕ್ರಷರ್‌ಗಳನ್ನು ಅಧಿಕೃತಗೊಳಿಸುವಂತೆ ಕೋರಿ 45 ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಆ ಪ್ರದೇಶ ಶೆಟ್ಟಿಹಳ್ಳಿ ಪರಿಸರ ಸೂಕ್ಷ್ಮವಲಯದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯ ಒಳಗೆ ಬರುವ ಕಾರಣ ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ನೀಡಿಲ್ಲ. ಬೌಂಡರಿ ನಿಗದಿ ಮಾಡದೇ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಅರ್ಜಿಗಳ ಇತ್ಯರ್ಥ ಮಾಡಿಲ್ಲ.

ಬ್ರಾಹ್ಮಣ ಬೇದೂರು ಗಣಿಗಾರಿಕೆಗೆ ಕಡಿವಾಣ

ಶಿವಮೊಗ್ಗ: ಸಾಗರ ತಾಲ್ಲೂಕಿನ ಬ್ರಾಹ್ಮಣ ಬೇದೂರು ಬೆಟ್ಟದ ಮೇಲ್ಭಾಗದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಜ್ಞಾನಿಗಳಾದ ಡಾ.ಟಿ.ವಿ. ರಾಮಚಂದ್ರ, ಡಾ.ಕೇಶವ ಕೊರ್ಸೆ, ಡಾ.ಮಾರುತಿ ಅವರನ್ನು ಒಳಗೊಂಡ ತಂಡ ಬೆಟ್ಟಕ್ಕೆ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪರಿಸರ ಸೂಕ್ಷ್ಮ ವಲಯದಲ್ಲಿರುವ ಬೇದೂರು ಬೆಟ್ಟದ ಗಣಿಗಾರಿಕೆ ತಡೆಯದಿದ್ದರೆ 2022ರ ಮಳೆಗಾಲದಲ್ಲಿ ಭಾರಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು.

ಕಂದಾಯ ಕಾಯ್ದೆ, ಅರಣ್ಯ, ಜೀವ ವೈವಿಧ್ಯ, ಗಣಿ, ಪಂಚಾಯತ್‌ ರಾಜ್ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆ ನಿಷೇಧಿಸಬೇಕು. ಬೆಟ್ಟದಲ್ಲಿ ಗಣಿಗಾರಿಕೆ ಕಾರಣ ನಿರ್ಮಾಣವಾದ ರಸ್ತೆ ಸಂಚಾರ ನಿರ್ಬಂಧಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸಂಭವನೀಯ ಭೂಕುಸಿತದ ಬಗ್ಗೆ ರೈತರಲ್ಲಿ ಜಾಗೃತಿ ಮಾಡಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ₹ 1.18 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಜಾಗವನ್ನು ವಶಕ್ಕೆ ಪಡೆಯಲು ಸಾಗರ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.

ಬೇದೂರು ಗ್ರಾಮದ ದಟ್ಟ ಹಸಿರು ಬೆಟ್ಟದ ಮೇಲ್ಭಾಗದ ಸರ್ವೆ ನಂಬರ್ 77, 78, 74ರಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ 2 ವರ್ಷಗಳಿಂದ ಕೆಂಪು ಕಲ್ಲು ತೆಗೆಯಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲದೆ ಎತ್ತರದ ಬೆಟ್ಟದಲ್ಲಿ ಗಣಿಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗಿದೆ. 2020ರ ಮಳೆಗಾಲದಲ್ಲಿ ಗಣಿಗಾರಿಕೆಯ ಕಂದಕಗಳಲ್ಲಿ ನೀರು ತುಂಬಿಕೊಂಡು ಜಲ ಒತ್ತಡ ನಿರ್ಮಾಣವಾಗಿ ಬೆಟ್ಟದ ಬುಡದಲ್ಲಿ ಭೂಕುಸಿತ ಸಂಭವಿಸಿತ್ತು. ನಾಲ್ಕು ಮನೆಗಳು ನೆಲಸಮವಾಗಿದ್ದವು. ಗ್ರಾಮಸ್ಥರು ತಾಲ್ಲೂಕು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಗಣಿಗಾರಿಕೆ ಸ್ಥಗಿತವಾಗಿರಲಿಲ್ಲ.

ಅಂಬಾರಗುಡ್ಡ: ಕಂಪನಿ ಅರ್ಜಿ ವಜಾ

ಶಿವಮೊಗ್ಗ: ಸಾಗರ ತಾಲ್ಲೂಕು ಅಂಬಾರಗುಡ್ಡ ಗಣಿಗಾರಿಕೆ ಸ್ಥಗಿತ ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಆ ಮೂಲಕ ಬಹು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

ಅಂಬಾರಗುಡ್ಡದಲ್ಲಿ ಈ ಹಿಂದೆ ಖಾಸಗಿ ಕಂಪನಿಯೊಂದು ಗಣಿಗಾರಿಕೆ ನಡೆಸಿತ್ತು. ಆಗ ತೆಗೆದ ಅದಿರು ಅಲ್ಲಿ ಸಂಗ್ರಹವಿದೆ. ಅದನ್ನು ಸಾಗಿಸಲು ಅನುಮತಿ ನೀಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಕಂಪನಿ ರಿಟ್ ಅರ್ಜಿ ಸಲ್ಲಿಸಿತ್ತು. ಇದಕ್ಕೆ ತಕರಾರು ಸಲ್ಲಿಸಿದ ಪರಿಸರವಾದಿ ಸಂಘಟನೆಗಳು, ‘ಸ್ಥಳದಲ್ಲಿ ಗಣಿಗಾರಿಕೆ ನಡೆಸಿದ ಕಂಪನಿ ತೆಗೆದ ಯಾವುದೇ ಅದಿರು ಸಂಗ್ರಹವಿಲ್ಲ. ಅದಿರು ಸಾಗಣೆಗೆ ಅನುಮತಿ ಪಡೆದು ಹೊಸದಾಗಿ ಗಣಿಗಾರಿಕೆ ನಡೆಸಲು ಕಂಪನಿ ಮುಂದಾಗಿದೆ’ ಎಂದು ಅಹವಾಲು ಮಂಡಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ವಾಸ್ತವ ಸ್ಥಿತಿಗತಿ ವರದಿ ಮಾಡಲು ಅಂಬಾರಗುಡ್ಡ ಗಣಿಗಾರಿಕೆ ಪ್ರದೇಶಕ್ಕೆ ಸಿವಿಲ್ ನ್ಯಾಯಾಧೀಶ ಜಿ. ರಾಘವೇಂದ್ರ ಅವರನ್ನು ಕಳುಹಿಸಿತ್ತು. ಅವರು ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳೊಂದಿಗೆ ಅಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಅಂಬಾರಗುಡ್ಡ ಪ್ರದೇಶ ಪಶ್ಚಿಮಘಟ್ಟದಲ್ಲಿದೆ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಗಣಿಗಾರಿಕೆಗೆ ಅನುಮತಿ ನೀಡಬಾರದು ಎನ್ನುವ ನಿಲುವನ್ನು ಪರಿಸರ ಸಂಘಟನೆಗಳು ವ್ಯಕ್ತಪಡಿಸಿದ್ದವು. ಈಗ ಕೋರ್ಟ್‌ ಕಂಪನಿಯ ಅರ್ಜಿಯನ್ನೇ ವಜಾಗೊಳಿಸಿದೆ.

ಕ್ವಾರಿಗಳಲ್ಲಿ ಹೊರ ರಾಜ್ಯದ ಕಾರ್ಮಿಕರು

ಬಹುತೇಕ ಕ್ವಾರಿಗಳಲ್ಲಿ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಬಂದ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಸ್ಥಳೀಯರು ಕೇವಲ ಸ್ಫೋಟಕ ಸಾಮಗ್ರಿಗಳ ನಿರ್ವಹಣೆ ಮಾಡುತ್ತಾರೆ. ಕ್ವಾರಿ, ಕ್ರಷರ್‌ಗಳಲ್ಲಿ ಅವಘಡಗಳು ಸಂಭವಿಸಿದಾಗ ಮೊದಲು ಜೀವ ಕಳೆದುಕೊಳ್ಳುವುದು ಅದೇ ಕಾರ್ಮಿಕರು. ಅಬ್ಬಲಗೆರೆ–ಹುಣಸೋಡು ಮಧ್ಯದಲ್ಲಿನ ಎಸ್‌.ಎಸ್‌.ಕ್ರಷರ್ ಬಳಿ ನಡೆದ ಸ್ಫೋಟ, ಗೆಜ್ಜೇನಹಳ್ಳಿ ಅವಘಡದಲ್ಲಿ ಕಾರ್ಮಿಕರು ಜೀವ ಕಳೆದುಕೊಂಡಿದ್ದರು. ಹಿಂದೆಯೂ ಇಂತಹ ಹಲವು ಅನಾಹುತಗಳು ನಡೆದಿವೆ. ಪ್ರತಿ ಬಾರಿಯೂ ಹಣದ ಪರಿಹಾರದ ಮೇಲೆ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ.

ಜಿಲ್ಲೆಯಲ್ಲಿ 95,593 ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ನೋಂದಾಯಿತವಲ್ಲದ ಕಾರ್ಮಿಕರೂ ಸೇರಿ ಬಹುತೇಕರು ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಗಣಿಗಾರಿಕೆ ವಲಯದಲ್ಲಿ ಕೆಲಸ ಮಾಡುವ ಶೇ 80ಷ್ಟು ಕಾರ್ಮಿಕರು ನೋಂದಣಿಯನ್ನೇ ಮಾಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು