ಹೊಳೆಹೊನ್ನೂರು: ‘ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ನಮ್ಮ ಜಮೀನನ್ನು ಅತಿಕ್ರಮಿಸಿದ್ದಾರೆ ಹಾಗೂ ಅದರಲ್ಲಿರುವ ಅಡಿಕೆ ಸಸಿಗಳನ್ನು ಜೆಸಿಬಿ ಮೂಲಕ ನಾಶಗೊಳಿಸಿದ್ದಾರೆ’ ಎಂದು ಆರೋಪಿಸಿ ರೈತರು ಪಟ್ಟಣ ಪಂಚಾಯಿತಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಸಮೀಪದ ಮೂಡಲ ವಿಠಲಾಪುರದ ಸರ್ವೆ ನಂ. 25ರಲ್ಲಿ 2 ಎಕರೆ ಜಮೀನನ್ನು ರಾಮಪ್ಪ ಅವರು 35 ವರ್ಷಗಳ ಹಿಂದಿನಿಂದಲೂ ಉಳುಮೆ ಮಾಡುತ್ತಿದ್ದಾರೆ. ಇದೇ ಜಮೀನನ್ನು ಪಟ್ಟಣ ಪಂಚಾಯಿತಿಯು ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಒತ್ತುವರಿ ಮಾಡಿಕೊಂಡು ಗುರುವಾರ ಏಕಾಏಕಿ ಜಮೀನಿನಲ್ಲಿದ್ದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅದೇ ಜಾಗದಲ್ಲಿ ಬೇಕಾದಷ್ಟು ಜಮೀನಿದ್ದು, ಆ ಜಮೀನನ್ನು ಅತಿಕ್ರಮಿಸಿಕೊಳ್ಳದೇ ರೈತ ರಾಮಪ್ಪ ಅವರ ಜಮೀನನ್ನು ಅತಿಕ್ರಮಿಸಿಕೊಂಡಿರುವುದು ಪಟ್ಟಣ ಪಂಚಾಯಿತಿಗೆ ಶೋಭೆ ತರುವುದಿಲ್ಲ’ ಎಂದು ಆರೋಪಿಸಿದರು.
‘ಎಸಿ ಕೋರ್ಟ್‌ನಲ್ಲಿ ರಾಮಪ್ಪ ಪರವಾಗಿ ಉಪ ವಿಭಾಗಧಿಕಾರಿ ಆದೇಶ ನೀಡಿದ್ದು, ಈ ಬಗ್ಗೆ ತಹಶೀಲ್ದಾರ್ ಇದುವರೆಗೂ ಗಮನ ಹರಿಸಿಲ್ಲ. ಈಗ ಪಟ್ಟಣ ಪಂಚಾಯಿತಿ ಜಮೀನುದಾರರಿಗೆ ನೋಟಿಸ್ ನೀಡದೇ ಹಾಗೂ ಮಾಹಿತಿ ನೀಡದೇ ಜಿಸಿಬಿ ಮೂಲಕ 2 ಎಕರೆ ಅಡಿಕೆ ಸಸಿಗಳನ್ನು ನಾಶ ಮಾಡಿದ್ದಾರೆ’ ಎಂದು ದೂರಿದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ್, ರಾಮಪ್ಪ, ರಂಗಪ್ಪ, ಕುಮಾರ್, ಬಸವರಾಜಪ್ಪ, ಸುರೇಶ್, ರಮೇಶ್, ವಿಜಯ್, ಹಾಲೇಶ್, ಶೇಖರಪ್ಪ, ಪ್ರಜ್ವಲ್, ದರ್ಶನ್, ನಾಗರಾಜ್ ಸೇರಿ ಇನ್ನಿತತರು ಹಾಜರಿದ್ದರು.