ಸೊರಬ: ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಅಡಿಕೆಗೆ ಕೊಳೆ ರೋಗ ಭಾದೆ ಎದುರಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನಲ್ಲಿ ಬಹುತೇಕ ಶುಂಠಿ, ಜೋಳ ಹಾಗೂ ಭತ್ತ ಬೆಳೆಯುತ್ತಿದ್ದ ರೈತರು ಅಡಿಕೆ ತೋಟ ಮಾಡುವಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಐದು ವರ್ಷಗಳ ಈಚೆಗೆ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿ ಅಡಿಕೆ ಬೆಳೆಯಲಾಗುತ್ತಿದೆ.
ಈ ವರ್ಷದ ಮಳೆಗಾಲದಲ್ಲಿ ಸುರಿದ ಭಾರಿ ಮಳೆ ಹಾಗೂ ಮಳೆಯ ನಡುವೆ ಆಗಾಗ ಬಿಸಿಲು ಬರುತ್ತಿರುವ ಪರಿಣಾಮ ತಾಲ್ಲೂಕಿನ ಎಲ್ಲೆಡೆ ಅಡಿಕೆ ತೋಟಗಳಿಗೆ ವ್ಯಾಪಕ ಪ್ರಮಾಣದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಕೊಳೆರೋಗದ ಪರಿಣಾಮ ಅಡಿಕೆ ಉದುರುತ್ತಿದೆ. ಶೇ 74ರಷ್ಟು ಬೆಳೆ ನಾಶವಾಗಿದೆ.
ತಾಲ್ಲೂಕಿನಲ್ಲಿ 8.900 ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳಲ್ಲಿ ಕೊಳೆರೋಗ ಆವರಿಸಿದೆ. ಅಧಿಕ ಮಳೆಗೆ ಈಗಾಗಲೇ ಶುಂಠಿ, ಜೋಳದ ಬೆಳೆ ನಾಶವಾಗಿದ್ದು, ಅಡಿಕೆಯನ್ನು ನೆಚ್ಚಿಕೊಂಡಿದ್ದ ರೈತರಿಗೆ ಇದೀಗ ನಿರಾಶೆ ಮೂಡಿದೆ.
ಈ ಬಾರಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿರುವುದರಿಂದ ಮಾರುಕಟ್ಟೆಯಲ್ಲಿ ಕೊಳೆ ಅಡಿಕೆ ಕೇಳುವವರಿಲ್ಲ. ಮರದ ಬುಡದಲ್ಲಿ ಬಿದ್ದ ಅಡಿಕೆ ಆರಿಸಲು ಕೂಲಿಕಾರರಿಗೆ ಕೂಲಿ ನೀಡುವಷ್ಟೂ ಬೆಲೆಯೂ ಸಿಗುತ್ತಿಲ್ಲ. ಇದರಿಂದ ಬೆಳೆಗಾರರು ಕೊಳೆ ಅಡಿಕೆ ಆರಿಸಲು ಮನಸ್ಸು ಮಾಡದೆ ಇರುವುದರಿಂದ ತೋಟದಲ್ಲಿ ಕೊಳೆತ ಅಡಿಕೆ ರಾಶಿ ಬಿದ್ದಿದೆ.
ಈ ಮೊದಲು ಕೊಳೆರೋಗ ತಡೆಯಲು ಅಡಿಕೆ ಕೊನೆಗಳಿಗೆ ಪ್ಲಾಸ್ಟಿಕ್ ಕವರ್ ಕಟ್ಟುವ ಪದ್ಧತಿ ಇತ್ತು. ಕ್ರಮೇಣ ಮೈಲುತುತ್ತ, ಸುಣ್ಣ, ರಾಳ ಮಿಶ್ರಣದ ಬೋರ್ಡೋ ದ್ರಾವಣ ಸಿಂಪಡಿಸುವ ಪದ್ಧತಿ ಚಾಲ್ತಿಗೆ ಬಂದಿದೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಇದೇ ದ್ರಾವಣ ಸಿಂಪಡಿಸುವುದು ಬೆಳೆಗಾರರಿಗೆ ಅನಿವಾರ್ಯವಾಗಿದೆ. ಯಾವುದೇ ಔಷಧ ಸಿಂಪಡಣೆಯಿಂದ ಕೊಳೆ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದು ಎಕರೆ ತೋಟಕ್ಕೆ ದ್ರಾವಣ ಸಿಂಪಡಿಸಲು ಕನಿಷ್ಠ ₹ 8,000 ಖರ್ಚು ಮಾಡಬೇಕು. ವಿಪರೀತ ಮಳೆಗೆ ಈ ವರ್ಷ ಕೆಲವು ಬೆಳೆಗಾರರು ಮೂರು, ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡಿದ್ದರೂ ನಿಯಂತ್ರಣ ಆಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರ ನಾಗರಾಜಪ್ಪ.
ತಾಲ್ಲೂಕಿನ ಉಳವಿ, ಚಂದ್ರಗುತ್ತಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕೊಳೆ ರೋಗ ಹೆಚ್ಚು ಕಾಣಿಸಿಕೊಂಡಿದೆ. 5 ವರ್ಷಗಳ ಹಿಂದೆ ಇದೇ ರೀತಿ ಮಳೆಯಿಂದ ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿದ್ದು, ಅಂದು ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹ 14,000 ಬೆಳೆ ಪರಿಹಾರ ನೀಡಿತ್ತು. ಅದೇ ರೀತಿಯ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂಬುದು ಚೌಡಿಕೊಪ್ಪ ಗ್ರಾಮದ ತೇಜಪ್ಪ ಅವರ ಒತ್ತಾಯ.
ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಧಾರಣೆ ಇದ್ದರೂ ಕೊಳೆ ರೋಗದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಶೀತ ಗಾಳಿಗೂ ಅಡಿಕೆ ಉದುರುತ್ತಿದೆ. ವಾಣಿಜ್ಯ ಬೆಳೆ ಎನ್ನುವ ಕಾರಣಕ್ಕೆ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುವುದನ್ನು ಬಿಟ್ಟು ಇತರೆ ಬೆಳೆಗೆ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮಾನದಂಡದಂತೆ ಪರಿಹಾರ ನೀಡಬೇಕು ಎನ್ನುವುದು ಅಡಿಕೆ ಬೆಳೆಗಾರರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.