ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಪೂರಕ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡದ ಬ್ಯಾಂಕ್‌ಗಳು!

ಟಿ‌.ರಾಘವೇಂದ್ರ
Published : 17 ಆಗಸ್ಟ್ 2024, 6:53 IST
Last Updated : 17 ಆಗಸ್ಟ್ 2024, 6:53 IST
ಫಾಲೋ ಮಾಡಿ
Comments

ಸೊರಬ: ನಿರುದ್ಯೋಗಿ ಯುವಕರು, ಆರ್ಥಿಕವಾಗಿ ಅಶಕ್ತರು ಕೃಷಿ ಕ್ಷೇತ್ರ ಮೌಲ್ಯವರ್ಧನೆಗೆ ಪೂರಕವಾದ ಕಿರು ಉದ್ಯಮ ಸ್ಥಾಪಿಸಲು ಹಾಗೂ ಉದ್ಯಮ ಮೇಲ್ದರ್ಜೆಗೇರಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಡಮಾನ ಸಾಲ ಲಭಿಸದೆ ಅರ್ಹರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೆಕೆಂಡರಿ ಕೃಷಿ ನಿರ್ದೇಶನಾಲಯದ ಯೋಜನೆಯಡಿ ಎರೆಹುಳು ಘಟಕ, ಎಣ್ಣೆ ತಯಾರಿಕೆ ಘಟಕ, ನೈಸರ್ಗಿಕ ಬಣ್ಣ ತಯಾರಿಕೆ, ಸುಗಂಧ ದ್ರವ್ಯ ಉತ್ಪಾದನೆ, ಬಿದರಿನ ನೇಯ್ಗೆ, ಅಡಿಕೆ ಹಾಳೆ ಪ್ಲೇಟ್ ತಯಾರಿಕೆ ಬಗ್ಗೆ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಇದೆ. ಆದರೆ, ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತಿವೆ.

ಇದರಿಂದ ಯಂತ್ರ‌ ಖರೀದಿಗೆ, ಅಗತ್ಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಕಟ್ಟಡ ನವೀಕರಣಕ್ಕೆ ತೊಂದರೆ ಉಂಟಾಗಿ ಸ್ವಯಂ ಉದ್ಯೋಗ ಮುಂದುವರಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

ಬ್ಯಾಂಕ್ ಖಾತೆಯಲ್ಲಿ ಶೇ 50ರಷ್ಟು ಮುಂಗಡ ಹಣ ಜಮೆ ಮಾಡಿದರೆ ಮಾತ್ರ ‌ಸಾಲ ನೀಡಲಾಗುವುದು ಎಂಬ ಷರತ್ತು ವಿಧಿಸಿರುವ ಕಾರಣ ಫಲಾನುಭವಿಗಳು ಅತಂತ್ರರಾಗಿದ್ದಾರೆ. ಪುರಸಭೆಯಲ್ಲೂ ಸಾಲಕ್ಕೆ ಸಂಬಂಧಪಟ್ಟಂತೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುತ್ತಿಲ್ಲ. 94 ‘ಸಿ’, 94 ‘ಸಿಸಿ’ ನಿವೇಶನ ಹಕ್ಕುಪತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

‘ಫಲಾನುಭವಿಗಳಿಗೆ ಸಾಲ ಪಡೆಯುವಾಗ ಇರುವ ಉತ್ಸಾಹ ಸಾಲ ತಿರುವಳಿ ಮಾಡುವಾಗ ಇರುವುದಿಲ್ಲ. ಕಟ್ಟು ಬಾಕಿ ಹೆಚ್ಚಾಗುತ್ತಿರುವ ಕಾರಣ ಸಾಲ ತೀರಿಸುವ ಹೊಣೆಗಾರಿಕೆ ಇರಬೇಕು ಎನ್ನುವ ಕಾರಣಕ್ಕೆ ಸಾಲ ಬಯಸುವ ಅರ್ಜಿದಾರರ ಖಾತೆಯಲ್ಲಿ ಸಾಲ ಪಡೆಯುವ ಶೇ‌ 50ರಷ್ಟು‌ ಮುಂಗಡ ಹಣ ಇರುವಂತೆ ನೋಡಿಕೊಳ್ಳಬೇಕಿದೆ’ ಎಂದು ಬ್ಯಾಂಕ್ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಯಾಜ್ ಅಹಮದ್
ನಯಾಜ್ ಅಹಮದ್
ಮರಿಯಾಂಬಿ
ಮರಿಯಾಂಬಿ

ಸರ್ಕಾರ ಯೋಜನೆಗಳ ಅಡಿಯಲ್ಲಿ ತರಬೇತಿ ನೀಡಿ ಬ್ಯಾಂಕುಗಳಲ್ಲಿ ಜಾಮೀನು ರಹಿತ ಸಾಲ ನೀಡಲು ಅವಕಾಶ ಕಲ್ಪಿಸಿದೆ. ಆದರೂ ಬ್ಯಾಂಕುಗಳಲ್ಲಿ ಸಾಲ ನೀಡಲು ಅಲೆದಾಡಿಸುತ್ತಿವೆ.

-ನಯಾಜ್ ಅಹಮದ್ ಆಕಾಂಕ್ಷಿ

ಬೀದಿಬದಿ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ₹ 10000 ಸಾಲ ನೀಡಲು ಅವಕಾಶ ಇದೆ. ಆದರೆ ಅರ್ಜಿ ಸಲ್ಲಿಸಿ 4 ತಿಂಗಳಾದರೂ ಸಾಲ ನೀಡಿಲ್ಲ.

–ಮಾರಿಯಾಂಬಿ ಹೂವಿನ ವ್ಯಾಪಾರಿ

ಪಿ.ಎಂ. ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಕನಿಷ್ಠ ₹10000 ಸಾಲ ನೀಡಲು ಅವಕಾಶವಿದೆ. ಬ್ಯಾಂಕ್‌ಗಳಿಗೆ‌ ಈ‌ ಬಗ್ಗೆ ಮಾಹಿತಿ ನೀಡಲಾಗಿದೆ.‌ ಸಾಲ ಕೊಡಲು ಬ್ಯಾಂಕ್‌ನಿಂದ ಒಪ್ಪಿಕೊಳ್ಳಲಾಗಿದೆ.

–ಚಂದನ್‌ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT