ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ವಿವಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
Published 11 ಜುಲೈ 2024, 14:30 IST
Last Updated 11 ಜುಲೈ 2024, 14:30 IST
ಅಕ್ಷರ ಗಾತ್ರ

ಭದ್ರಾವತಿ: ತಾಲ್ಲೂಕಿನ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. 

ಕುವೆಂಪು ವಿವಿಯ ಬ್ಯಾಂಕ್ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕುವೆಂಪು ವಿವಿಯಲ್ಲಿ ಆಗುತ್ತಿರುವ ತೊಂದರೆಗಳಿಗೆ ಬೇಸತ್ತು ವಿದ್ಯಾರ್ಥಿಗಳು ಧಿಕ್ಕಾರದ ಘೋಷಣೆ ಕೂಗಿದರು.

ವಿವಿಯ ಹಾಸ್ಟೆಲ್‌ನಲ್ಲಿ ಊಟೋಪಚಾರದ ಅವ್ಯವಸ್ಥೆ ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಲಾಗಿತ್ತು. ವಿದ್ಯಾರ್ಥಿ ವೇತನ, ಫಲಿತಾಂಶ ವಿಳಂಬ, ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ವಿಳಂಬ, ಪರೀಕ್ಷಾ ಶುಲ್ಕ ಹೆಚ್ಚಳ, ಆಸ್ಪತ್ರೆಯ ಅಸಮರ್ಪಕ ನಿರ್ವಹಣೆ, ವಿದ್ಯಾರ್ಥಿ ನಿಲಯದ ಅವ್ಯವಸ್ಥೆ, ಕಾಲೇಜು ಕೊಠಡಿಗಳು ಸೋರುತ್ತಿರುವುದು ಮತ್ತು ಸಹ್ಯಾದ್ರಿ ಉತ್ಸವ ಹಲವು ವರ್ಷಗಳಿಂದ ನಡೆಯದೆ ನಿಂತಿರುವುದೂ ಸೇರಿದಂತೆ ಹಲವು ವಿಚಾರಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.‌

ಸಮಸ್ಯೆ ಪರಿಹಾರಕ್ಕೆ ಕ್ರಮದ ಭರವಸೆ:

ಪ್ರತಿಭಟನೆಗೆ ಸ್ಪಂದಿಸಿದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಎಸ್.ಬಿ. ಕೃಷ್ಣಮೂರ್ತಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಹ್ಯಾದ್ರಿ ಉತ್ಸವ ನಡೆಸಲಾಗುವುದು. ಜೂ 30ರೊಳಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು. ವಿದ್ಯಾಲಯದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT