ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್ ಭವಿಷ್ಯ ಅತಂತ್ರ

Published 16 ಜನವರಿ 2024, 22:02 IST
Last Updated 16 ಜನವರಿ 2024, 22:02 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ನೀಡಿದ್ದ ‘ತಾತ್ಕಾಲಿಕ ಜೀವದಾನ’ದ ಗಡುವು ಇದೇ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಕಾರ್ಖಾ ನೆಯ ಕಾರ್ಮಿಕರ ವಲಯದಲ್ಲಿ ತಳಮಳ ಶುರುವಾಗಿದೆ.

‘ಉತ್ಪಾದನೆ ಚಟುವಟಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆ ಅಂದು (ಮಾರ್ಚ್ 31) ಕೊನೆಗೊಳ್ಳಬಹುದು’ ಎಂದು ವಿಐಎಸ್‌ಎಲ್ ಆಡಳಿತ ಮಂಡಳಿ ಸೋಮವಾರ ಕಾರ್ಮಿಕರನ್ನು ಕರೆದು ಮೌಖಿಕವಾಗಿ ಸೂಚಿಸಿದೆ’ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್‌.ಜಿ.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಆದರೆ, ಇದನ್ನು ವಿಐಎಸ್‌ಎಲ್ ಆಡಳಿತ ಖಚಿತಪಡಿಸಿಲ್ಲ.

ಸದ್ಯ ವಿಐಎಸ್‌ಎಲ್‌ನಲ್ಲಿ ಭಾರ ತೀಯ ಉಕ್ಕು ಪ್ರಾಧಿಕಾರಕ್ಕೆ (SAIL)ಬೇಕಾದ ಬಿಡಿ ಭಾಗಗಳ ಉತ್ಪಾದನೆ ಮಾತ್ರ ನಡೆಯುತ್ತಿದ್ದು, ಅಲ್ಲಿ ಪ್ರೈಮರಿ ಮಿಲ್ ಹಾಗೂ ಬಾರ್‌ಮಿಲ್‌ಗಳು ಕಾರ್ಯಾಚರಣೆಯಲ್ಲಿವೆ.

ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಮಾತ್ರ ಆಗುತ್ತಿದೆ. ಪ್ರೈಮರಿ ಮಿಲ್‌ನಲ್ಲಿನ ಉತ್ಪಾದನೆಗೆ 20 ದಿನಗಳಿಗೆ, ಬಾರ್‌ಮಿಲ್‌ಗೆ ಒಂದೂವರೆ ತಿಂಗಳಿಗೆ ಸಾಲುವಷ್ಟು ಮಾತ್ರ ಕ‌ಚ್ಚಾ ವಸ್ತು ಇದೆ. ನಂತರ ಮುಂದೇನು‘ ಎಂದು ಸುರೇಶ್‌ ಪ್ರಶ್ನಿಸಿದರು.

ಪೂರ್ವಭಾವಿ ಸಭೆಗೂ ಆಹ್ವಾನವಿಲ್ಲ:

‘ಪ್ರತಿ ವರ್ಷದ ಆರಂಭದಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವಾರ್ಷಿಕ ಆಯವ್ಯಯ ಯೋಜನಾ ಸಭೆ (ಎಬಿಪಿ) ನಡೆಸುತ್ತದೆ. ಅಲ್ಲಿ ಕಾರ್ಖಾನೆಗಳ ವಾರ್ಷಿಕ ಬೇಡಿಕೆ, ಕಚ್ಚಾವಸ್ತು ಪೂರೈಕೆ ಉತ್ಪಾದನೆ ಹಾಗೂ ಖರ್ಚು–ವೆಚ್ಚದ ಕುರಿತು ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ. ಅದರ ಪೂರ್ವಭಾವಿ ಸಭೆಗಳಿಗೂ ವಿಐಎಸ್‌ಎಲ್‌ಗೆ ಆಹ್ವಾನ ನೀಡಿಲ್ಲ. ಇದು ನಮ್ಮ ಆತಂಕ ಇನ್ನಷ್ಟು ಹೆಚ್ಚಿಸಿದೆ’ ಎಂದು ಸುರೇಶ್ ತಿಳಿಸಿದರು.

ವರ್ಷದ ಹಿಂದೆ ತೀರ್ಮಾನ:

ವಿಐಎಸ್‌ಎಲ್ ಮುಚ್ಚುವ ಬಗ್ಗೆ 2023ರ ಜನವರಿ 16ರಂದು ಉಕ್ಕು ಪ್ರಾಧಿಕಾರದ ನಿರ್ದೇಶಕ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ತೀರ್ಮಾನಕ್ಕೆ ವರ್ಷ ಸಂದ ಹಿನ್ನೆಲೆಯಲ್ಲಿ ಕಾರ್ಖಾನೆಯ 1,400 ಗುತ್ತಿಗೆ ಕಾರ್ಮಿಕರು ಮಂಗಳವಾರ ರಾತ್ರಿ ಭದ್ರಾವತಿಯಲ್ಲಿ ಕರಾಳ ದಿನ ಆಚರಿಸಿ ಪಂಜಿನ ಮೆರವಣಿಗೆ ನಡೆಸಿದರು. ಭಾರತೀಯ ಉಕ್ಕು ಪ್ರಾಧಿಕಾರದ ನಿರ್ಧಾರ ವಿರೋಧಿಸಿ ಕಾರ್ಮಿಕರು ಆರಂಭಿಸಿದ್ದ ಪ್ರತಿಭಟನೆಗೂ ಜನವರಿ 18ರಂದು ಒಂದು ವರ್ಷ ತುಂಬಲಿದೆ.

ಗ್ರೀನ್ ಸ್ಟೀಲ್ ಉತ್ಪಾದನೆ: ‘ಸೆಫಿ’ ಸಲಹೆ

‘ವಿಐಎಸ್‌ಎಲ್‌ ಮುಚ್ಚುವ ಅಗತ್ಯವಿಲ್ಲ. ಈಗ ಇರುವ ಮೂಲ ಸೌಕರ್ಯ ಬಳಸಿ ಅಲ್ಲಿ ₹ 30,000 ಕೋಟಿ ಬಂಡವಾಳ ಹೂಡಿ ಗ್ರೀನ್‌ ಸ್ಟೀಲ್ ಉತ್ಪಾದನೆ ಮಾಡಬಹುದು ಎಂಬ ಸಲಹೆ ಭಾರತೀಯ ಉಕ್ಕು ಪ್ರಾಧಿಕಾರದ ಅಧೀನದ ಸೆಫಿ ಒಕ್ಕೂಟ (ಸೇಯ್ಲ್ ಎಕ್ಸಿಕ್ಯುಟಿವ್ ಫೆಡರೇಶನ್ ಆಫ್ ಇಂಡಿಯಾ) ನೀಡಿದೆ. ಯೋಜನೆ ಕೂಡ ಸಿದ್ಧಪಡಿಸಿದೆ. ಆದರೆ, ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರದ ‘ಶಾಶ್ವತ ಮುಚ್ಚುವ ನಿರ್ಧಾರ’ ಅಡ್ಡಿಯಾಗಿದೆ’ ಎಂದು ಎಚ್‌.ಜಿ. ಸುರೇಶ್ ಬೇಸರ ವ್ಯಕ್ತಪಡಿಸಿದರು.

‘ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ರಮಣದುರ್ಗದಲ್ಲಿ 65 ಹೆಕ್ಟೇರ್ ಗಣಿ ಇದ್ದು, ಸಂಡೂರಿನಲ್ಲಿ 130 ಎಕರೆ ಗಣಿ ಪ್ರದೇಶವು ಮಂಜೂರಾತಿ ಹಂತದಲ್ಲಿದೆ. ಅದನ್ನು ಬಳಸಿಕೊಂಡು ವಿಐಎಸ್‌ಎಲ್ ಉಳಿಸಬಹುದು’ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಹುಲ್ಲು ಕತ್ತರಿಸುವ ಕಾರ್ಯಕ್ಕೆ ಬಳಕೆ!

ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ವಿಮಾ (ಇಎಸ್‌ಐ) ಯೋಜನೆಯ ವ್ಯಾಪ್ತಿಗೆ ಒಳಪಡಬೇಕಾದರೆ ಕಡ್ಡಾಯವಾಗಿ ಮಾಸಿಕ 13 ದಿನದಂತೆ 6 ತಿಂಗಳಲ್ಲಿ 76 ದಿನ ಕೆಲಸ ಮಾಡಲೇಬೇಕಿದೆ. ಕಾರ್ಮಿಕರಿಗೆ ಈ ಸವಲತ್ತು ತಪ್ಪದಂತೆ ನೋಡಿಕೊಳ್ಳಲು ವಿಐಎಸ್‌ಎಲ್ ಆಡಳಿತ ಶ್ರಮಿಸುತ್ತಿದೆ.

‘13 ದಿನ ಉತ್ಪಾದನಾ ಘಟಕಗಳಲ್ಲಿ ಕೆಲಸವಿಲ್ಲದ ಕಾರಣ ಕಾರ್ಖಾನೆ ಆವರಣದಲ್ಲಿನ ಹುಲ್ಲು ಕತ್ತರಿಸುವ ಕಾರ್ಯಕ್ಕೆ ಬಳಕೆ ಆಗುತ್ತಿದ್ದೇವೆ’ ಎಂದು ಕಾರ್ಮಿಕರೊಬ್ಬರು ಹೇಳಿದರು.

ವಿಐಎಸ್‌ಎಲ್‌ ಸದ್ಯ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಮುಂದೆ ಏನಾಗಬಹುದೋ ಎಂಬ ಅಸ್ಥಿರ ಭಾವದಿಂದ ಕೆಲವು ಊಹಾಪೋಹಗಳು ಕೇಳಿಬರುತ್ತಿವೆ. ಅದಕ್ಕೆ ನಾವು ಪ್ರತಿಕ್ರಿಯಿಸಲು ಆಗುವುದಿಲ್ಲ..
–ಎಲ್‌.ಪ್ರವೀಣ್‌ಕುಮಾರ್‌, ವಿಐಎಸ್‌ಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ
ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಬಂದು ವಿಐಎಸ್‌ಎಲ್ ಶಾಶ್ವತವಾಗಿ ಉಳಿಸುವ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ಈಗ ಮತ್ತೆ ಚುನಾವಣೆ ಬಂದಿದೆ
–ಎಚ್‌.ಜಿ.ಸುರೇಶ್, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT