ಗುರುವಾರ , ಡಿಸೆಂಬರ್ 1, 2022
20 °C
ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶಕ್ಕೆ ಪೂರ್ವ ಸಿದ್ಧತಾ ಸಭೆ: ಈಶ್ವರಪ್ಪ ಅಭಿಮತ

ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದೇ ಬಿಜೆಪಿ ಧ್ಯೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಿಂದುಳಿದ ವರ್ಗಗಗಳನ್ನು ಸಂಘಟಿಸಿ, ಅವರಿಗೆ ನ್ಯಾಯ ಒದಗಿಸು ವುದು ಬಿಜೆಪಿಯ ಧ್ಯೇಯ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕಲಬುರಗಿಯಲ್ಲಿ ಅಕ್ಟೋಬರ್‌ 30ರಂದು ಬಿಜೆಪಿಯಿಂದ ಆಯೋಜಿಸಿರುವ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳು ಚುನಾವಣೆಯಲ್ಲಿ ಕೇವಲ ಮತ ಹಾಕಲು ಮಾತ್ರ ಸೀಮಿತವಲ್ಲ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಹೆಚ್ಚು ವರ್ಷ ಅಧಿಕಾರದಲ್ಲಿದೆ. ಇಷ್ಟು ವರ್ಷವಾದರೂ ನಮ್ಮ (ಹಿಂದುಳಿದ ವರ್ಗದವರ) ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ಶಿಕ್ಷಣ, ವಸತಿ ಸೇರಿದಂತೆ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ. ಇದೀಗ ಮನೆ–ಮನೆಗೆ ಗಂಗೆ ರೂಪದಲ್ಲಿ ಮೋದಿ ಸರ್ಕಾರ ಕುಡಿಯುವ ನೀರನ್ನು ಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಹಿಂದುಳಿದ ವರ್ಗಗಳನ್ನು ಸಂಘಟನೆ ಮಾಡಿಕೊಂಡು ಹೋಗಬೇಕಿರುವುದು ಮುಖ್ಯ’ ಎಂದರು.

‘ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿಜೆಪಿ ಗೆಲ್ಲಲು ಹಿಂದುಳಿದ ವರ್ಗ ಕಾರಣ. ಪಕ್ಷದ ಗೆಲುವಿಗೆ ಪರೋಕ್ಷವಾಗಿ ಈ ವರ್ಗ ಬೆನ್ನೆಲುಬಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಹಿಂದ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಿ, ಹೊರಗಿಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಶ್ರಮಿಕ ಸಮುದಾಯ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಶ್ಲಾಘನೀಯ ಕಾರ್ಯ. ಆ ನಿಟ್ಟಿನಲ್ಲಿ ಹಿಂದುಳಿದ ಸಣ್ಣ ಸಣ್ಣ ಸಮುದಾಯ ಸಂಘಟಿತಗೊಳ್ಳಬೇಕಿದೆ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಮಾತನಾಡಿದರು. ಪಕ್ಷದ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಅಶೋಕ್ ಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್, ಪಿ.ಸಿ.ಮೋಹನ್, ಆರ್.ಕೆ.ಸಿದ್ದರಾಮಣ್ಣ, ಟಿ.ಡಿ.ಮೇಘರಾಜ್, ಗಿರೀಶ್ ಉಪ್ಪಾರ್, ವಿ.ರಾಜು, ಶಿವರಾಜ್ ಇದ್ದರು.

***

ರಾಷ್ಟ್ರ ಭಕ್ತ ಮುಸ್ಲಿಮರು ಧ್ವನಿ ಎತ್ತಿ: ಈಶ್ವರಪ್ಪ

ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳ ನಾಯಕರನ್ನು ಕೇಂದ್ರ ಸರ್ಕಾರ ಬಂಧಿಸಿರುವುದು ಸ್ವಾಗತಾರ್ಹವಾಗಿದೆ. ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಈ ಸಂಘಟನೆಗಳ ವಿರುದ್ಧ ರಾಷ್ಟ್ರ ಭಕ್ತ ಮುಸ್ಲಿಮರು ಧ್ವನಿ ಎತ್ತಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಈ ಎರಡೂ ಸಂಘಟನೆಗಳ ವಿರುದ್ಧ ಬಿಗಿಯಾದ ಕ್ರಮ ಜರುಗಿಸಬೇಕು. ಭಯೋತ್ಪಾದಕರನ್ನು ಮೆಟ್ಟಿ ನಿಲ್ಲಬೇಕು. ದಾಳಿ ಮುಂದುವರಿಯಬೇಕು’ ಎಂದ ಅವರು, ‘ಈ ಕುರಿತು ಕಾಂಗ್ರೆಸ್‌ ಮಾತನಾಡದಿರುವುದು ಅಪಮಾನ. ಕಾಂಗ್ರೆಸ್‌ ಸರ್ಕಾರ ರಾಷ್ಟ್ರದ್ರೋಹಿಗಳಿಗೆ ಹಿಂದಿನಿಂದ ಬೆಂಬಲ ನೀಡುವ ವ್ಯವಸ್ಥಿತ ಕೆಲಸ ಮಾಡುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು