ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ವಿರೋಧಿಗಳಿಗೆ ಉತ್ತರಿಸಲು ಕಾರ್ಯಕರ್ತರ ಪಡೆ: ಸಚಿವ ಕೆ.ಎಸ್.ಈಶ್ವರಪ್ಪ

‘ನೂತನ ಕೃಷಿ ಕಾಯ್ದೆ ಸತ್ಯ-ಮಿಥ್ಯೆ’ ಜಾಗೃತಿ ಕಾರ್ಯಾಗಾರ
Last Updated 17 ಜುಲೈ 2021, 11:46 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಕಾಯ್ದೆ ವಿರೋಧಿಸುವ, ಅನಗತ್ಯವಾಗಿ ಟೀಕಿಸುವ ಜನರಿಗೆ ತಕ್ಕ ಉತ್ತರ ಕೊಡಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗಬೇಕು. ಕಾಯ್ದೆಯ ಕುರಿತು ಅಧ್ಯಯನ ಕೈಗೊಳ್ಳಬೇಕು. ಆಳವಾದ ಜ್ಞಾನ ಹೊಂದಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಶನಿವಾರ ಆಯೋಜಿಸಿದ್ದ ‘ನೂತನ ಕೃಷಿ ಕಾಯ್ದೆ ಸತ್ಯ-ಮಿಥ್ಯೆ’ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಯಾವುದೇ ಕಾರ್ಯಕ್ರಮ ಜಾರಿ ತಂದರೂ ಕಾಂಗ್ರೆಸ್‌, ರೈತ ಸಂಘಟನೆಗಳು ಸೇರಿದಂತೆ ಕೆಲವರು ವಿರೋಧ ಮಾಡುತ್ತಾರೆ. ಕೊರೊನಾ ಲಸಿಕೆ ಪಡೆಯಲೂ ವಿರೋಧ ಮಾಡಿದ್ದರು. ಬಳಿಕ ಅವರೇ ಲಸಿಕೆ ಪಡೆಯಲು ಮುಂದೆ ಬಂದರು. 370ನೇ ವಿಧಿ ಜಾರಿಗೆ ತಂದಾಗಲೂ ವಿರೋಧ ವ್ಯಕ್ತಪಡಿಸಿದ್ದರು ಎಂದು ದೂರಿದರು.

ಬಿಜೆಪಿ ರಾಜ್ಯ ರೈತಮೋರ್ಚಾ ಕಾರ್ಯದರ್ಶಿ ಡಾ.ನವೀನ್ ಮಾತನಾಡಿ, ಕೃಷಿ ಕಾಯ್ದೆಗಳನ್ನು ವಿರೋಧ ಮಾಡುವ ಸಲುವಾಗಿಯೇ ಬಿಜೆಪಿಯೇತರ ಪಕ್ಷಗಳ ಗುಂಪು ಸಿದ್ಧವಾಗಿದೆ. ರೈತರ ಸಬಲೀಕರಣದ ಸಲುವಾಗಿಯೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾಯ್ದೆ ಕುರಿತು ಅಧ್ಯಯನ ನಡೆಸದೇ, ಮಾಹಿತಿ ಪಡೆಯದೆ ಅಪಪ್ರಚಾರ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

60 ವರ್ಷಗಳು ಆಡಳಿತ ನಡೆಸಿದ ಕಾಂಗ್ರೆಸ್ ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಆ ಪದಗಳನ್ನು ಸವಕಲು ಮಾಡಿದೆ. ರೈತರ ಬೆನ್ನೆಲುಬು ಮುರಿದಿದೆ. ಬಿಜೆಪಿ ರೈತರ ಸಬಲೀಕರಣ ಗಮನದಲ್ಲಿಟ್ಟುಕೊಂಡು ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದರು.

ಕೃಷಿ ಕಾಯ್ದೆಗಳಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ. ರೈತರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ. ಕಂಪನಿಗಳು ಹಾಗೂ ಕೃಷಿಕರ ಮಧ್ಯೆ ಒಪ್ಪಂದ ಏರ್ಪಟ್ಟು ಬೆಳೆ ಬೆಳೆದರೆ ಹೆಚ್ಚಿನ ಮೌಲ್ಯ ವರ್ಧನೆ ಸಾಧ್ಯವಾಗಲಿದೆ. ರೈತರು ಕೂಡ ಉದ್ಯಮ ಸ್ಥಾಪಿಸಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಒಪ್ಪಂದ ಕಾಯ್ದೆಯಲ್ಲಿ ಭೂಮಿ ಕಂಪನಿಗಳಿಗೆ ಹೋಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸುಳ್ಳು. ಒಪ್ಪಂದ ಕೃಷಿಯಲ್ಲಿ ರೈತರಿಗೆ ಹೆಚ್ಚು ರಕ್ಷಣೆ ಸಿಗಲಿದೆ ಎಂಬ ಅಂಶ ಮರೆ ಮಾಚಲಾಗುತ್ತಿದೆ. ರೈತರು ಕೂಡ ಆಲೋಚನಾ ಕ್ರಮ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್, ’ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಮುಖಂಡರಾದ ಗಿರೀಶ್ ಪಟೇಲ್, ಪ್ರಸನ್ನ ಕೆರೆಕೈ, ಎಸ್.ದತ್ತಾತ್ರಿ, ವೆಂಕಟೇಶ್ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT