ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ನೀಡಿ ಲೇಖನ ಬರೆಸಿಕೊಳ್ಳುವುದು ಆತ್ಮಸಾಕ್ಷಿ ವಂಚನೆ: ಜಿ. ಪ್ರಶಾಂತ ನಾಯಕ

‘ಪಂಚಪಾತ್ರೆಯ ಹುಡುಗಿ, ಇತರೆ ಕಥೆ’ಗಳ ಸಂಗ್ರಹ ಕೃತಿ ಬಿಡುಗಡೆ
Published 12 ಫೆಬ್ರುವರಿ 2024, 13:39 IST
Last Updated 12 ಫೆಬ್ರುವರಿ 2024, 13:39 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಲೇಖಕರಿಂದ ಹಣ ಪಡೆದು ಲೇಖನ‌ ಬರೆದುಕೊಡುವ ಜನರು ನಮ್ಮಲ್ಲಿ ಸೃಷ್ಟಿಯಾಗಿದ್ದಾರೆ. ಇದರಿಂದ ಸ್ವತಃ ಬರೆಯಬಲ್ಲೆ ಎನ್ನುವ ಜಾಣ್ಮೆಯನ್ನು ಕೆಲವು ಲೇಖಕರು ಕಳೆದುಕೊಂಡಿದ್ದಾರೆ. ಇದು ಆತ್ಮಸಾಕ್ಷಿಯನ್ನು ವಂಚಿಸಿಕೊಂಡಂತೆ’ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಜಿ. ಪ್ರಶಾಂತ ನಾಯಕ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯ, ಶಿಕಾರಿಪುರ ಸುವ್ವಿ ಪಬ್ಲಿಕೇಷನ್ಸ್ ಮತ್ತು ಜನ ಸ್ಪಂದನ ಟ್ರಸ್ಟ್‌ನಿಂದ ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿ ಮೋಹನ್ ಚಂದ್ರಗುತ್ತಿ ಅವರ ‘ಪಂಚಪಾತ್ರೆಯ ಹುಡುಗಿ ಮತ್ತು ಇತರೆ ಕಥೆ’ಗಳ ಸಂಗ್ರಹ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ ಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಅದು ತಪಸ್ಸು. ತಂತ್ರಜ್ಞಾನವು ಪುಸ್ತಕ ಓದುವ ಹವ್ಯಾಸ ಕಸಿದುಕೊಳ್ಳುತ್ತಿದೆ. ಇದರಿಂದ ಸಾಹಿತ್ಯ ಓದುಗರ ಸಂಖ್ಯೆ ಕ್ಷಿಣಿಸುತ್ತಿದೆ.‌ ಯುವಪೀಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

‘ಒಂದು ಕೃತಿ ಅನೇಕ ತಲೆಮಾರುಗಳನ್ನು ಗುರುತಿಸುವುದರ ಜೊತೆಗೆ ಚರಿತ್ರೆ ಸೃಷ್ಟಿಸುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಕನ್ನಡ ಸಾಹಿತ್ಯ ಚೌಕಟ್ಟಿನಲ್ಲಿ ಅತಿ ದೊಡ್ಡ ಕಂದಕವಿದೆ. ಇಲ್ಲಿ ಜಾನಪದ ಸಾಹಿತ್ಯ ಅಧ್ಯಯನ ನಡೆಸಿರುವ ವಿದ್ವಾಂಸರ ಕೊರತೆ ಹೆಚ್ಚಿದೆ. ಇದರಿಂದ ಜನಪದ ಕಥೆಗಳನ್ನು ಸಂಗ್ರಹಿಸಲು ಹಿನ್ನಡೆಯಾಗುತ್ತಿದೆ. ಇದು ದುರಂತ’ ಎಂದು ಹೇಳಿದರು.

‘ಯುವಪೀಳಿಗೆ ಪುಸ್ತಕಗಳನ್ನು ಓದುವ ಗುಣ ರೂಢಿಸಿಕೊಳ್ಳಬೇಕು. ಇದರಿಂದ ಲೇಖಕಕರಿಗೆ ಮೌಲ್ಯ ಹೆಚ್ಚುತ್ತದೆ. ಲೇಖಕ ಮರಣ ಹೊಂದಿದರೂ ಪುಸ್ತಕದಲ್ಲಿ ದಾಖಲಾದ ಸನ್ನಿವೇಶ ಹಾಗೂ ಕಥೆಗಳು ಜೀವಂತವಾಗಿರುತ್ತವೆ. ವಿದ್ಯಾರ್ಥಿಗಳು ಸಾಹಿತ್ಯ ಓದಿಗೆ ಹೆಚ್ಚು ಒತ್ತು ನೀಡಬೇಕು’ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಎಸ್.ವೆಂಕಟೇಶ ಅಭಿಪ್ರಾಯಪಟ್ಟರು.

ಸಾಹಿತಿ ಮೋಹನ್ ಚಂದ್ರಗುತ್ತಿ ಮಾತನಾಡಿ, ‘ರಾಜ್ಯದ 8 ಜಿಲ್ಲೆಗಳು ಹಾಗೂ 28 ತಾಲ್ಲೂಕುಗಳ ಎನ್ಎಸ್ಎಸ್ ವಿದ್ಯಾರ್ಥಿಗಳು ಸಂಗ್ರಹಿಸಿದ ‘ಪಂಚಪಾತ್ರೆಯ ಹುಡುಗಿ’ ಸಂಗ್ರಹ ಕೃತಿಯು ಹಳ್ಳಿ ಸೊಗಡಿನ ಜನಪದ ಕಥಾ ಹಂದರ ಹೊಂದಿದೆ’ ಎಂದು ಹೇಳಿದರು.

‘ಇದು ರಾಜ್ಯದಲ್ಲಿಯೇ ಎರಡನೇ ಪ್ರಯತ್ನವಾಗಿದ್ದು, ಕೃತಿಯಲ್ಲಿ ಕಾಲೇಜಿನ 60 ವಿದ್ಯಾರ್ಥಿಗಳು ಸಂಗ್ರಹಿಸಿದ 60 ಜನಪದ ಕಥೆಗಳು ದಾಖಲಾಗಿವೆ. ಕೃತಿ ರಚನೆಗೆ ವಿಶ್ವವಿದ್ಯಾಲಯದಿಂದ ₹ 10,000 ಪ್ರೋತ್ಸಾಹ ಧನ ಲಭಿಸಿದೆ’ ಎಂದರು.

ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲರಾದ ಸೈಯದ್ ಸನಾವುಲ್ಲಾ, ನಿವೃತ್ತ ಪ್ರಾಂಶುಪಾಲ ಕೆ.ಬಿ.ಧನಂಜಯ್, ಸುವ್ವಿ ಪಬ್ಲಿಕೇಷನ್ಸ್ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್, ಪ್ರಾಧ್ಯಾಪಕರಾದ ‌ಎಚ್.ಪಿ.ಮಂಜುನಾಥ್, ಸಿರಾಜ್ ಅಹಮ್ಮದ್, ಕೆ.ಎನ್.ಮಹದೇವ ಸ್ವಾಮಿ, ಶಂಭುಲಿಂಗ, ಬಿ.ಎಂ.ಚಂದ್ರಶೇಖರ್ ಹಾಲಮ್ಮ, ಸುಮಿತ್ರ ಮೋಹನ್ ಚಂದ್ರಗುತ್ತಿ ಇದ್ದರು.

Cut-off box - ಜನಪದ ಕಥೆ ಸಂಗ್ರಹಕ್ಕೆ ಒತ್ತು ನೀಡಬೇಕು ಶಾಲಾ–ಕಾಲೇಜು ಮಟ್ಟದಲ್ಲಿ ಜನಪದ ಕಥೆಗಳ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಜಾನಪದ ಸಾಹಿತ್ಯವನ್ನು ಮುಂದಿನ ತಲೆ ಮಾರಿಗೆ ದಾಟಿಸಬಹುದು. ಪದವಿ ಕಾಲೇಜು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ‘ಪಂಚಪಾತ್ರೆಯ ಹುಡುಗಿ’ ಜನಪದ ಸಂಗ್ರಹ ಕೃತಿ ಪ್ರೇರಣೆ ಆಗಲಿದೆ. ಮಕ್ಕಳಿಂದ ಹೆಚ್ಚಿನ ಕೃತಿಗಳನ್ನು ಹೊರ ತರುವ ಕಾರ್ಯ ಆಗಬೇಕು ಎಂದು ಪ್ರಾಧ್ಯಾಪಕ ಜಿ. ಪ್ರಶಾಂತ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT