ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬಿಸಿಲಿನ ಪ್ರಖರತೆ; ಬಿಸಿಯೂಟಕ್ಕೆ ಮಕ್ಕಳ ನಿರಾಸಕ್ತಿ

ಬರಗಾಲದ ಹಿನ್ನೆಲೆ: ರಜೆ ಇದ್ದರೂ ಮಕ್ಕಳಿಗೆ ಶಾಲೆಗಳಲ್ಲಿ ಊಟದ ವ್ಯವಸ್ಥೆ
ಮಲ್ಲಪ್ಪ ಸಂಕೀನ್
Published 7 ಮೇ 2024, 6:12 IST
Last Updated 7 ಮೇ 2024, 6:12 IST
ಅಕ್ಷರ ಗಾತ್ರ

ಶಿವಮೊಗ್ಗ: ಶಾಲೆಗಳ ಬೇಸಿಗೆ ರಜೆ ವೇಳೆ ರಗಾಲದ ಕಾರಣದಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಉಣಬಡಿಸುತ್ತಿದೆ. ಆದರೆ, ಬಿಸಿಲಿನ ಪ್ರಖರತೆಯ ಕಾರಣ ಮಲೆನಾಡಿನಲ್ಲಿ ಮಕ್ಕಳು ಶಾಲೆಗಳತ್ತ ತಲೆಹಾಕುತ್ತಿಲ್ಲ. ಇದು ಯೋಜನೆಯ ಆಶಯಕ್ಕೆ ಧಕ್ಕೆ ಉಂಟುಮಾಡಿದೆ.

ಜಿಲ್ಲೆಯಲ್ಲಿ 1ರಿಂದ 9ನೇ ತರಗತಿವರೆಗೆ 1,50,702 ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 21,014 ವಿದ್ಯಾರ್ಥಿಗಳು ಮಾತ್ರ ಬಿಸಿಯೂಟ ಸವಿಯಲು ಈಗ ಶಾಲೆಗೆ ಬರುತ್ತಿದ್ದಾರೆ.

ಬರಪೀಡಿತ ಪ್ರದೇಶ:

ಶಿವಮೊಗ್ಗ ಜಿಲ್ಲೆಯನ್ನು ಸರ್ಕಾರ ‘ಬರಪೀಡಿತ ಪ್ರದೇಶ’ ಎಂದು ಘೋಷಣೆ ಮಾಡಿದೆ. ಹೀಗಾಗಿಯೇ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ ಆರಂಭಿಸಿದೆ. ಆದರೆ, ಬಿಸಿಲಿನ ತಾಪ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡುತ್ತಿಲ್ಲ.

ಬಹುತೇಕ ಕಡೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಮಧ್ಯಾಹ್ನದ ಹೊತ್ತು ಅವರು ಹೊರಗೆ ಹೋದರೆ ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲಕರ ಮನವೊಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿಯೇ ಅಧಿಕಾರಿಗಳು ಶಾಲೆಗೆ ಬರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ದಾರೆ. 

ನಿತ್ಯ ಮಧ್ಯಾಹ್ನ ಅನ್ನ ಸಾಂಬಾರ್‌, ತಿಳಿಸಾರು, ಪುಲಾವ್‌, ಚಿತ್ರಾನ್ನ ಕೊಡಲಾಗುತ್ತಿದೆ. ಬಿಸಿಯೂಟ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಗಮನಿಸಲು ಸಿಆರ್‌ಪಿ ಮತ್ತು ಬಿಆರ್‌ಪಿಗಳನ್ನು ಉಸ್ತುವಾರಿ ಆಗಿ ನಿಯೋಜಿಸಲಾಗಿದೆ. ಅವರು ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಾರೆ. ಏ. 20ರಿಂದ ಆರಂಭವಾಗಿರುವ ಬಿಸಿಯೂಟ ಮೇ 27ಕ್ಕೆ ಮುಗಿಯಲಿದೆ. ಮೇ 28ರಿಂದ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಾಲೆಗಳ ಆರಂಭದೊಂದಿಗೆ ಬಿಸಿಯೂಟ ವ್ಯವಸ್ಥೆಯೂ ಎಂದಿನಂತೆಯೇ ಶುರುವಾಗಲಿದೆ. 

ಶಾಲೆಗಳಲ್ಲೇ ಬೇಸಿಗೆ ಶಿಬಿರ?:

ಬಿಸಿಯೂಟ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ಈಗ ಶಾಲೆಗೆ ನಿತ್ಯ ಬೆಳಿಗ್ಗೆ 9.30ಕ್ಕೆ ಬಂದು 4.30ರವರೆಗೆ ಇರುತ್ತಾರೆ. ಈ ವೇಳೆ ಪಠ್ಯ ಬೋಧನೆ ಇರುವುದಿಲ್ಲ. ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತದೆ. ಕಥೆ ಹೇಳುವುದು, ನೃತ್ಯ ಮಾಡಿಸುವುದು, ಹಾಡು ಹೇಳುವುದು, ಕೇರಂ, ಚದುರಂಗ ಆಡಿಸುವುದು, ರಂಗಕಲೆ ಕಲಿಸುವುದು ಹೀಗೆ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತಿದೆ. ಮನೋವಿಕಾಸಕ್ಕೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ಶಿಕ್ಷಕರು ನೀಡುತ್ತಿದ್ದಾರೆ.

ಮಧ್ಯಾಹ್ನ ಯೂಟಕ್ಕೆ ಬರಲು ಒಟ್ಟು 22,183 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ 21,014 ವಿದ್ಯಾರ್ಥಿಗಳು ಬಂದಿದ್ದಾರೆ. ಸರಾಸರಿ ಶೇ 94ರಷ್ಟು ಸಾಧನೆ ಆಗಿದೆ.

ಬಿಸಿಯೂಟ ಕೇಂದ್ರದ ಮುಖ್ಯ ಶಿಕ್ಷಕರೇ ನಿತ್ಯ ಮಕ್ಕಳ ವಿವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡುತ್ತಾರೆ. ಮಕ್ಕಳು ಶಾಲೆಗೆ ಬರುವಂತೆ ಬಲವಂತ ಮಾಡುವುದಿಲ್ಲ. ಬಂದಂತಹ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ರೀತಿಯಿಂದ ತೊಂದರೆ ಆಗದಂತೆ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಬರಗಾಲ ಆವರಿಸಿರುವುದರಿಂದ ಬಡ ಮಕ್ಕಳಗೆ ನೆರವಾಗಲಿ ಎಂಬ ಉದ್ದೇಶದಿಂದಲೇ ಸರ್ಕಾರ ಬೇಸಿಗೆ ರಜೆ ಅವಧಿಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುತ್ತಿದೆ. ಆದರೆ ಬಿಸಿಲು ಜಾಸ್ತಿ ಇರುವುದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಅನ್ಸರ್‌ ಅಲಿ ಬೇಗ್‌ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT