ಶಿವಮೊಗ್ಗ: ಅನ್ವಿತಾ ಆರ್ಟ್ಸ್ ಅರ್ಪಿಸುವ ‘ನಾ ನಿನ್ನ ಬಿಡಲಾರೆ’ ಚಿತ್ರ ತಂಡದಿಂದ ಸಿನಿ ಸಂಭ್ರಮ ಕಾರ್ಯಕ್ರಮ ಆ. 17ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ‘ನಾ ನಿನ್ನ ಬಿಡಲಾರೆ’ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು.
ಸಿನಿ ಸಂಭ್ರಮ ಕಾರ್ಯಕ್ರಮದಲ್ಲಿ ನಟಿಯರಾದ ಭಾವನಾ, ಅಪೂರ್ವಾ, ನಟರಾದ ಕಿಶೋರ್, ಶರತ್ ಲೋಹಿತಾಶ್ವ ಭಾಗವಹಿಸಲಿದ್ದಾರೆ. ಅಂದಾಜು ₹ 30 ಕೋಟಿ ಬೆಲೆ ಬಾಳುವ ಶ್ವಾನ ಪ್ರದರ್ಶನ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
‘ಶ್ರೀಮತಿ ಶಿವಮೊಗ್ಗ’ ಸೌಂದರ್ಯ ಸ್ಪರ್ಧೆ, ಅಂತರ ಕಾಲೇಜು ಫ್ಯಾಶನ್ ಶೋ, ಡ್ರಾಮಾ ಜೂನಿಯರ್ಸ್ ಮತ್ತು ಸೀನಿಯರ್ಸ್ ಕಲಾವಿದರು ಭಾಗವಹಿಸುವರು. ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ಸಿನಿಮಾ ಡ್ಯಾನ್ಸರ್‌ಗಳಿಂದ ನೃತ್ಯ ನಡೆಯಲಿದೆ’ ಎಂದು ಹೇಳಿದರು.
‘ನಾ ನಿನ್ನ ಬಿಡಲಾರೆ ಸಿನಿಮಾದ ಕಥೆ ಭಿನ್ನವಾಗಿದೆ. ಇದೊಂದು ಹಾರರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ದೊಡ್ಡ ಪ್ರಮಾಣದ ತಾರಾಗಣ ಇದೆ. ಶೀಘ್ರ ಹಲವು ಕಡೆಗಳನ್ನು ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಪೈರಸಿ ತಡೆಯಲು ಮುಂದಾಗಬೇಕಿದೆ. ಎಲ್ಲ ಗೊತ್ತಿದ್ದರೂ ಮೌನಕ್ಕೆ ಶರಣಾಗಿವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.