ಹೊಳೆಹೊನ್ನೂರು: ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ಶನಿವಾರ ಸಂಜೆ ಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಗಲಾಟೆಯನ್ನು ಬಿಡಿಸಲು ಹೋದ ಪೋಲೀಸರ ಮೇಲೆಯೂ ಹಲ್ಲೆ ನಡೆದಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಯುವಕನೊಬ್ಬನಿಗೂ ಏಟು ಬಿದ್ದಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ಎ.ಜೆ.ಕಾರಿಯಪ್ಪ, ಹೊಳೆಹೊನ್ನೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಹಾಗೂ ಪೊಲೀಸ್ ಅಧಿಕಾರಿಗಳು ಗಲಭೆಯನ್ನು ಹತೋಟಿಗೆ ತಂದರು.
ಘರ್ಷಣೆ ಸಂಬಂಧ 3 ಕೇಸುಗಳು ದಾಖಲಾಗಿದ್ದು, 22 ಜನರನ್ನು ರಾತ್ರಿಯೇ ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರವೇ ಗಣಪತಿಗಳ ವಿಸರ್ಜನೆ: ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಹಲವರಿಗೆ ಗಾಯಗಳಾದ ಕಾರಣ ಎಎಸ್‌ಪಿ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಗಣಪತಿ ಮೂರ್ತಿಗಳನ್ನು ಶನಿವಾರ ರಾತ್ರಿಯೇ ವಿಸರ್ಜಿಸಲಾಯಿತು.
ಸಿಆರ್‌ಪಿಎಫ್ ತುಕಡಿ ನಿಯೋಜನೆ: ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಎಫ್ ತುಕಡಿಯನ್ನು ರಾತ್ರಿಯಿಡೀ ನಿಯೋಜಿಸಲಾಗಿತ್ತು.