ಬುಧವಾರ, ಮೇ 25, 2022
30 °C

ಭದ್ರಾ ಜಲಾಶಯದ ಕಾಮಗಾರಿ ತನಿಖೆಗೆ ಮೂವರು ನಿ. ಇಂಜಿನಿಯರ್‌ಗಳ ಸಮಿತಿ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿ ಸರ್ಕಾರದ ಪಾತ್ರವಿಲ್ಲ. ಪಟ್ಟಿ ಕುರಿತು ಅಸಮಾಧಾನವಿದ್ದರೆ ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಬಿ.ಆರ್.ಪ್ರಾಜೆಕ್ಟ್‌ ಬಳಿ ಸೋಮವಾರ ಭದ್ರಾ ಜಲಾಶಯ ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮೀಸಲಾತಿ ಕರಡು ಪಟ್ಟಿಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪಕ್ಷಭೇದವಿಲ್ಲದೆ ಆಕ್ಷೇಪಗಳು ಕೇಳಿ ಬಂದಿವೆ. ಕೆಲವರು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಚುನಾವಣಾ ಆಯೋಗ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿ ಮೀಸಲಾತಿ ಪ್ರಕಟಿಸುವುದಿಲ್ಲ. ರಾಜಕೀಯ ಹಸ್ತಕ್ಷೇಪ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.

ಹಿಂದೆಯೂ ಮೀಸಲಾತಿ ಪ್ರಕಟವಾದಾಗ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಈಗಲೂ ಹಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಹೊರಡಿಸುವ ಅಂತಿಮ ಪಟ್ಟಿಯೂ ತೃಪ್ತಿತರದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.

ಭದ್ರಾಜಲಾಶಯದ ಕಾಮಗಾರಿ ತನಿಖೆಗೆ ಸಮಿತಿ: ಭದ್ರಾಜಲಾಶಯದ ಕ್ರಸ್ಟ್‌ಗೇಟ್‌ ಕೆಳಗೆ ನಡೆದ ಕಾಮಗಾರಿಯ ಕುರಿತು ವರದಿ ನೀಡಲು ಮೂವರು ನಿವೃತ್ತ ಮುಖ್ಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು.

ನಿವೃತ್ತ ಎಂಜಿನಿಯರ್‌ಗಳಾದ ಚಲುವರಾಜ್, ಶಿವಪ್ರಸಾದ್ ಹಾಗೂ ರೂಪನಗುಡಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. 2016ರಿಂದ 2018ರವರೆಗೆ ನಡೆದಿದ್ದ ಕಾಮಗಾರಿ ಕುರಿತು ರೈತ ಮುಖಂಡರು ಆರೋಪ ಮಾಡಿದ್ದಾರೆ. ಕಾಮಗಾರಿ ಕಳಪೆ ಮಾಡಲಾಗಿದೆಯೇ? ಪ್ರಕೃತಿ ವಿಕೋಪದಿಂದ ಹಾಳಾಗಿದೆಯೇ ಎನ್ನುವ ಕುರಿತು ಸಮಿತಿ ತನಿಖೆ ನಡೆಸಲಿದೆ. ಅವ್ಯವಹಾರದ ಕಾರಣ ಕಾಮಗಾರಿ ಕಳಪೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸದ್ಯ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಜುಲೈ 15ರ ವೇಳೆಗೆ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು