ಮಂಗಳವಾರ, ಸೆಪ್ಟೆಂಬರ್ 28, 2021
21 °C

ಸಂಸತ್ ಅಧಿವೇಶನ: ಕಲಾಪದಿಂದ ಕಾಂಗ್ರೆಸ್‌ ಪಲಾಯನ ಖಂಡನೀಯ -ಬಿ.ವೈ.ರಾಘವೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪೆಗಾಸಸ್ ವಿಷಯವನ್ನಿಟ್ಟುಕೊಂಡು ಕಲಾಪಗಳಿಂದ ಪಲಾಯನ ಮಾಡುತ್ತಿರುವುದು ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಈ ಅಧಿವೇಶನದಲ್ಲಿ ಸಾಕಷ್ಟುಮಸೂದೆಗಳು ಮಂಡನೆಯಾಗಬೇಕಿತ್ತು. ಆದರೆ, ವಿರೋಧ ಪಕ್ಷಗಳ ನಡವಳಿಕೆಯಿಂದ ಈ ಮಸೂದೆಗಳು ಚರ್ಚೆ ಇಲ್ಲದೇ ಮಂಡನೆಯಾಗುವುದು ಅನಿವಾರ್ಯವಾಗಿದೆ. ವಿರೋಧ ಪಕ್ಷಗಳು ಸಹಕಾರ ಕೊಟ್ಟರೆ ಬಿಲ್ ಪಾಸ್ ಮಾಡಬಹುದು. ವಿರೋಧ ಪಕ್ಷಗಳು ತಮ್ಮ ನಡವಳಿಕೆ ಕೈಬಿಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿವೇಶನದಲ್ಲಿ ಕೋವಿಡ್‌ಗೆ ಸಂಬಂಧಿಸಿದ ಮಹತ್ವದ ವಿಚಾರ‌ಗಳ ಚರ್ಚೆ ನಡೆಸಬೇಕಿತ್ತು. ಆದರೆ, ಅಧಿವೇಶನದಲ್ಲಿ ಗೊಂದಲವೆಬ್ಬಿಸುತ್ತಿದ್ದಾರೆ. ಮೂರು ವಾರಗಳಿಂದಲೂ ವಿರೋಧ ಪಕ್ಷಗಳ ನಡವಳಿಕೆ ಯಿಂದ ಕಲಾಪ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನವನ್ನು ಬಿಜೆಪಿ ಸ್ವಾಗತಿಸುತ್ತದೆ. ತಮಿಳುನಾಡು ಈ ಯೋಜನೆಗೆ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಅವರು ಯೋಜನೆಯನ್ನು ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಮೇಕೆದಾಟು ಯೋಜನೆಯಿಂದ ಕರ್ನಾಟಕ ರಾಜ್ಯ ಬಳಸುವ ನೀರಿನ ಪ್ರಮಾಣ ಕೂಡ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲೇ ಬಳಸಲಾಗುತ್ತದೆ ಎಂದರು.

ಮುಂದಿನ ಚುನಾವಣೆಯಲ್ಲೂ ಬಿಜೆಪಿಗೆ ಬಹುಮತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಂಪುಟ ರಚನೆಯಲ್ಲಿ ಪ್ರಾದೇಶಿಕ ಸಮಾನತೆ ಹಾಗೂ ಅನುಭವಗಳಿಗೆ ಪ್ರಾತಿನಿದ್ಯ ನೀಡಲಾಗಿದೆ. ಒಳ್ಳೆಯ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸವಿದ್ದು, ಮುಂದಿನ ಚುನಾವಣೆಯಲ್ಲೂಪಕ್ಷ ಹೆಚ್ಚಿನ ಸ್ಥಾನದೊಂದಿಗೆ ಬಹುಮತಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಇದ್ದರು.

‘ಯಡಿಯೂರಪ್ಪ ಕಣ್ಣೀರು: ಅಪಾರ್ಥ ಬೇಡ’
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿ ನಿರ್ಗಮಿಸುವಾಗ ವಿದಾಯ ಭಾಷಣ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಪಕ್ಷ ಕೊಟ್ಟ ಜವಾಬ್ದಾರಿ ನೆನೆದು ಭಾವುಕರಾಗಿದ್ದಾರೆ. ಬೇರೆನೂ ಇಲ್ಲ. ಇದಕ್ಕೆ ತಪ್ಪು ಭಾವನೆ ಕಲ್ಪಿಸುವುದು ಬೇಡ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.