ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಾಗಿ ಲಸಿಕೆಯ ಕೃತಕ ಅಭಾವ ಸೃಷ್ಟಿ; ಎಚ್‌.ಎಸ್‌.ಸುಂದರೇಶ್ ಆರೋಪ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಆರೋಪ
Last Updated 20 ಸೆಪ್ಟೆಂಬರ್ 2021, 13:18 IST
ಅಕ್ಷರ ಗಾತ್ರ

ಶಿವಮೊಗ್ಗ: ಮೋದಿ ಜನ್ಮದಿನದಂದು ದಾಖಲೆ ಬರೆಯಲೆಂದೇ ಹಲವು ದಿನ ಲಸಿಕೆಯ ಕೃತಕ ಅಭಾವ ಸೃಷ್ಟಿಸಲಾಗಿತ್ತು. ಒಂದೇ ದಿನ 2 ಕೋಟಿ ಲಸಿಕೆ ನೀಡಲು ದಾಸ್ತಾನು ಮಾಡುತ್ತಾ ಬಂದಿದ್ದರು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಆರೋಪಿಸಿದರು.

ಹಲವು ತಿಂಗಳು ಕೃತಕ ಅಭಾವ ಸೃಷ್ಟಿಸಿ, ಜನರನ್ನು ಅಲೆದಾಡಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಸರದಿಯಲ್ಲಿ ನಿಂತರೂ ಸಾಮಾನ್ಯ ಜನರಿಗೆ ಲಸಿಕೆ ಸಿಗಲಿಲ್ಲ. ದಾಖಲೆಗಾಗಿ ಲಸಿಕೆ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ.ಅಷ್ಟಕ್ಕೂ ಈ ಲಸಿಕೆ ಬಿಜೆಪಿ ನಾಯಕರು ಬಿಟ್ಟಿ ಕೊಟ್ಟಿಲ್ಲ. ಇದು ಸಾರ್ವಜನಿಕರ ತೆರಿಗೆ ಹಣ. ಪುಕ್ಸಟ್ಟೆ ಪ್ರಚಾರಕ್ಕೆ ಬಳಸಿಕೊಂಡಿರುವುದು ಅವಿವೇಕತನ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

ದೇವಾಲಯಯಗಳ ವಿಷಯದಲ್ಲೂ ದ್ವಂದ್ವ ನೀತಿ:

ದೇವಾಲಯಗಳ ವಿಷಯದಲ್ಲೂ ಬಿಜೆಪಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರ್ಕಾರದ ಸಚಿವರು, ಬಿಜೆಪಿ ಮುಖಂಡರು ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಕೆಡವುವವರು ಇವರೇ, ಸಂತಾಪ ವ್ಯಕ್ತಪಡಿಸುವವರೂ ಇವರೆ. ದೇವರ ಹೆಸರಲ್ಲಿ ಜನರ ಭಾವನೆಗಳನ್ನು ದಿಕ್ಕುತಪ್ಪಿಸಿ ಮತಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳುವ ಇವರು ದೇವರನ್ನೂ ಬಿಡುವುದಿಲ್ಲ ಎಂದು ಕುಟುಕಿದರು.

2009ರಲ್ಲೇ ಸುಪ್ರೀಂಕೋರ್ಟ್ ಸಾರ್ವಜನಿಕ ಸ್ಥಳದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಆದೇಶ ನೀಡಿತ್ತು. ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೆ ಇತ್ತು. ಆದೇಶವನ್ನು ತರಾತುರಿಯಲ್ಲಿ ಜಾರಿಗೊಳಿಸಲಿಲ್ಲ. ಒಂದೇ ಒಂದು ಧಾರ್ಮಿಕ ಕಟ್ಟಡ ಒಡೆಯಲಿಲ್ಲ. ಆದರೆ, ದೇವರ ಹೆಸರು ಹೇಳಿಕೊಂಡು ಅಧಿಕಾರ ಮಾಡುತ್ತಿರುವ ಬಿಜೆಪಿ ದೇವಾಲಯಗಳನ್ನು ನೆಲಸಮ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 1500ಕ್ಕೂ ಅಧಿಕ ದೇವಾಲಯ ತೆರವುಗೊಳಿಸಲು ಕೋರ್ಟ್‌ ಸೂಚಿಸಿದೆ. ಬಿಜೆಪಿ ಮುಖಂಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆತಂಕ ಮೂಡಿದೆ. ಹಿಂದೂ ಧರ್ಮವನ್ನು ಮೈಮೇಲೆ ಹೊತ್ತುಕೊಂವರಂತೆ ವರ್ತಿಸುವ ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮೌನಿಗಳಾಗಿದ್ದಾರೆ ಎಂದು ಟೀಕಿಸಿದರು.

ಬೆಲೆ ಏರಿಕೆ ಕಡಿವಾಣಕ್ಕೆ ಆಗ್ರಹ:

ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ. ಆಹಾರ ಪದಾರ್ಥಗಳು, ತೈಲ ಸೇರಿದಂತೆ ಅಗತ್ಯ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಬೆಲೆ ಇಳಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊರೊನಾದ ಸಮಯದಲ್ಲಿ ಮೃತಪಟ್ಟವರಿಗೆ ರಾಜ್ಯ, ಕೇಂದ್ರ ಸರ್ಕಾರ ರಿಹಾರ ನೀಡಿಲ್ಲ. ಮೃತರ ಕುಟುಂಬಗಳು ಸಂಕಷ್ಟದಲ್ಲಿವೆ. ಅಭಿವೃದ್ಧಿ ಕಾಮಗಾರಿಗಳು ಕಿಕ್ ಬ್ಯಾಕ್ ಇಲ್ಲದೇ ನಡೆಯುತ್ತಿಲ್ಲ. ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೊಸ ಮುಖ್ಯಮಂತ್ರಿ ಬಂದರೂ ಪ್ರಯೋಜನವಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಚಂದ್ರಭೂಪಾಲ್, ಯಮುನಾ ರಂಗೇಗೌಡ, ವೈ.ಎಚ್.ನಾಗರಾಜ್, ಸೌಗಂಧಿಕಾ, ಚಂದನ್, ಎನ್.ಡಿ.ಪ್ರವೀಣ್, ಚಂದ್ರು, ರಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT