ಭಾನುವಾರ, ನವೆಂಬರ್ 1, 2020
19 °C
ಶಿಕಾರಿಪುರ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಪಕ್ಷೇತರ ಸಹಕಾರ: ಗದ್ದುಗೆ ಏರಲು ಮುಂದಾದ ಬಿಜೆಪಿ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಕಾರಣ ಬಿಜೆಪಿ ಪಕ್ಷೇತರರ ಸಹಕಾರದಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರಲು ಮುಂದಾಗಿದೆ.

ಪುರಸಭೆ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ಒಂದು ವರ್ಷ ನಾಲ್ಕು ತಿಂಗಳ ನಂತರ ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಆಯ್ಕೆ ಮೀಸಲಾತಿ ಪ್ರಕಟವಾಗಿದೆ. ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೀಸಲಾತಿ ಪ್ರಕಟಗೊಂಡ ಕಾರಣ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. 2019ರ ಮೇ 29ರಂದು ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 12 ವಾರ್ಡ್‌ಗಳಲ್ಲಿ, ಬಿಜೆಪಿ 8 ವಾರ್ಡ್‌ಗಳಲ್ಲಿ ಹಾಗೂ 3 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ 16 ನೇ ವಾರ್ಡ್ ಪಕ್ಷೇತರ ಸದಸ್ಯೆ ರೇಖಾಬಾಯಿ ಮಂಜುನಾಥ್ ಸಿಂಗ್ ಹಾಗೂ 8 ನೇ ವಾರ್ಡ್ ನ ಪಕ್ಷೇತರ ಸದಸ್ಯ ಮೊಹಮದ್ ಸಾಧಿಕ್ ಬಿಜೆಪಿಗೆ ಸೇರ್ಪಡೆಯಾದರು.

ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಪುರಸಭೆ ಸದಸ್ಯರಾದ 9ನೇ ವಾರ್ಡ್ ಜಯನಗರ ಬಡಾವಣೆ ಸದಸ್ಯ ರಮೇಶ್ (ಗುಂಡ), 20 ನೇ ವಾರ್ಡ್ ಆಶ್ರಯ ಬಡಾವಣೆ ಸದಸ್ಯೆ ಉಮಾವತಿ ಅವರು ಸದಸ್ಯ ಸ್ಥಾನಕ್ಕೆ ಮಾರ್ಚ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅಂಗೀಕೃತವಾದ ನಂತರ ಜೂನ್ 23ರಂದು ಸಂಸದ ಬಿ.ವೈ. ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ 1ನೇ ವಾರ್ಡ್ ಪಕ್ಷೇತರ ಸದಸ್ಯ ಜೀನಳ್ಳಿ ಪ್ರಶಾಂತ್ ಬಿಜೆಪಿಗೆ ಸೇರ್ಪಡೆಯಾದರು.

ಪ್ರಸ್ತುತ ಪುರಸಭೆಯಲ್ಲಿ ಪಕ್ಷೇತರ ಸದಸ್ಯರಿಬ್ಬರನ್ನು ಸೇರಿ ಬಿಜೆಪಿ 11 ಸ್ಥಾನ ಹೊಂದಿದ್ದು, ಅಗತ್ಯ ಬಿದ್ದರೆ ಮಾತ್ರ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತಗಳನ್ನು ಸೇರಿ ಬಿಜೆಪಿ ಒಟ್ಟು 13 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿದೆ.

ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದೆ. 20 ವರ್ಷಗಳ ನಂತರ 12 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷೇತರ ಸದಸ್ಯರೊಬ್ಬರ ಸಹಕಾರದಿಂದ ಪುರಸಭೆ ಅಧಿಕಾರವನ್ನು ಹಿಡಿಯಲು ಪ್ರಯತ್ನ ನಡೆಸಿತ್ತು.

ಆದರೆ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ರಮೇಶ್ ಗುಂಡಾ, ಉಮಾವತಿ ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್ ಆಸೆಗೆ ತಿಲಾಂಜಲಿ
ಇಟ್ಟಿದ್ದಾರೆ.

ಹಿಂದುಳಿದ ವರ್ಗ 2ಎ ಮಹಿಳೆ ಮೀಸಲಾತಿ ಪ್ರಕಾರ ಪಕ್ಷೇತರ ಸದಸ್ಯೆ 16 ನೇ ವಾರ್ಡ್‌ನ ರೇಖಾಬಾಯಿ ಮಂಜುನಾಥ್ ಸಿಂಗ್, ಬಿಜೆಪಿಯ 12 ನೇ ವಾರ್ಡ್ ಸದಸ್ಯೆ ಲಕ್ಷ್ಮಿ ಮಹಾಲಿಂಗಪ್ಪ, 7ನೇ ವಾರ್ಡ್‌ನ ರೂಪ ಮಂಜುನಾಥ್ ಮೂವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಅವಕಾಶವಿದೆ. ಮೂವರಲ್ಲಿ ಯಾರು ಅಧ್ಯಕ್ಷರಾಗಬೇಕು ಎನ್ನುವ ತೀರ್ಮಾನವನ್ನು ಬಿಜೆಪಿ ಕಚೇರಿಯಲ್ಲಿ ನಡೆಯುವ ಮುಖಂಡರ ಸಭೆ ನಿರ್ಧರಿಸಲಿದೆ ಎನ್ನುವ ಮಾತುಗಳು ಮುಖಂಡರ ವಲಯದಲ್ಲಿ ಕೇಳಿಬರುತ್ತಿದೆ.

ಪುರುಷ ಸದಸ್ಯರಿಗೆ ನಿರಾಸೆ

10 ವರ್ಷಗಳಿಂದ ಪುರಸಭೆಯಲ್ಲಿ ಮಹಿಳಾ ಸದಸ್ಯರು ಅಧ್ಯಕ್ಷರಾಗಲು ಪೂರಕವಾದ ಮೀಸಲಾತಿ ಪ್ರಕಟವಾಗುತ್ತಿದೆ. ಈ ಬಾರಿಯಾದರೂ ಪುರುಷ ಸದಸ್ಯರು ಅಧ್ಯಕ್ಷರಾಗಲು ಪೂರಕವಾದ ಮೀಸಲಾತಿ ಪ್ರಕಟವಾಗುತ್ತದೆ ಎನ್ನುವ ಆಕಾಂಕ್ಷೆಯನ್ನು ಪುರುಷ ಸದಸ್ಯರು ಇಟ್ಟುಕೊಂಡಿದ್ದರು. ಆದರೆ ಈ ಬಾರಿಯೂ ಮಹಿಳಾ ಸದಸ್ಯರಿಗೆ ಅಧ್ಯಕ್ಷ ಪದವಿ ಮೀಸಲಾಗಿರುವುದರಿಂದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪುರುಷ ಸದಸ್ಯರಿಗೆ ನಿರಾಸೆಯುಂಟಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು