‘ಅನ್‌ಲಾಕ್’ ಸಂತಸದಲ್ಲಿ ಕೊರೊನಾ ಮರೆತ ಜನ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಕಾರಣ ರಾಜ್ಯ ಸರ್ಕಾರ ಆದೇಶದಂತೆ ಅನ್‌ಲಾಕ್ ಘೋಷಿಸಲಾಗಿದೆ. ಆದರೆ, ಅನ್‌ಲಾಕ್ ಆಗುವುದನ್ನೇ ಕಾದು ಕುಳಿತಿದ್ದ ಜನರು ಕೊರೊನಾ ಸೋಂಕನ್ನೇ ಮರೆತು ಮನೆಗಳಿಂದ ಹೊರಬೀಳುತ್ತಿದ್ದಾರೆ. ವೈದ್ಯರು 3ನೇ ಅಲೆ ಅಪ್ಪಳಿಸಲಿದೆ ಎಂದು ಹೇಳುತ್ತಿದ್ದರೂ, ಜನರು
ಜವಾಬ್ದಾರಿಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ.
ಶಿವಮೊಗ್ಗ ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಜಾತ್ರೆಯಂತೆ ಜನರ ಗುಂಪು ಕಂಡುಬರುತ್ತಿದೆ. ರಸ್ತೆ, ಮಾರುಕಟ್ಟೆ, ವಾಣಿಜ್ಯ ಮಳಿಗೆ, ಬಸ್ ನಿಲ್ದಾಣ, ಹೋಟೆಲ್ ಮುಂತಾದ ಕಡೆ ಜನರು ಗುಂಪುಗೂಡುವ ಮೂಲಕ ಪರಸ್ಪರ ಅಂತರವನ್ನೇ ಮರೆತಿದ್ದಾರೆ. ಕಾರ್ಯಕ್ರಮ ಮತ್ತು ಪ್ರತಿಭಟನೆ ಸಂದರ್ಭ ನೂರಾರು ಜನರು ಒಂದೆಡೆ ಸೇರುತ್ತಿದ್ದಾರೆ. ಮಾಸ್ಕ್ ಕೂಡ ನೆಪ ಮಾತ್ರಕ್ಕೆ ಎಂಬಂತಾಗಿದೆ.
ಅನ್‌ಲಾಕ್‌ದಲ್ಲಿ ಮಾಲ್, ದೇವಸ್ಥಾನ, ಪ್ರವಾಸಿ ತಾಣ ತೆರೆಯುವುದಕ್ಕೆ ಅವಕಾಶ ಸಿಕ್ಕಿದ ಕಾರಣ, ಜನರ ಸಂಚಾರ ಮತ್ತಷ್ಟು ಹೆಚ್ಚಾಗಿದೆ. ಕೊರೊನಾ ಇದೇ ಎಂಬುದನ್ನೇ ಜನರು ಮರೆತಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದಾರೆ.
ಕರ್ಫ್ಯೂ ತೆರವಾದ ನಂತರ ಪೊಲೀಸರು ಕೂಡ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿಲ್ಲ. ಅನಗತ್ಯವಾಗಿ ರಸ್ತೆಗಿಳಿದವರನ್ನು ನಿಯಂತ್ರಿಸಲು ಆಗುತ್ತಿಲ್ಲ. ಹೀಗಾಗಿ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ, ಒಂದನೇ ಅಲೆ ಕಡಿಮೆಯಾದ ನಂತರ ಮಾಡಿದ ತಪ್ಪನ್ನೇ ಈಗಲೂ ಮತ್ತೆ ಮಾಡುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಪ್ರಕರಣ ಇಳಿಕೆ–ಸಂಚಾರ ಏರಿಕೆ: ಜಿಲ್ಲೆಯಲ್ಲಿ ನಾಕಂಕಿಗೆ ದಾಟಿದ್ದ ಸೋಂಕಿತ ಸಂಖ್ಯೆ ಈಚೆಗೆ ಎರಡಂಕಿಗೆ ಇಳಿದಿದೆ. ಈ ಮಧ್ಯೆ ಕೋವಿಡ್ ಅನ್‌ಲಾಕ್ ಆದ ಮೇಲೆ ಸೋಕಿಂತರ ಸಂಖ್ಯೆ ತಗ್ಗಿದ್ದರೂ ಅಷ್ಟಾಗಿ ಕಡಿಮೆ ಆಗಿಲ್ಲ. ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸಿದರೂ ಜನರಿಗೆ ಭಯವೇ
ಇಲ್ಲದಂತಾಗಿದೆ. ಅನ್‌ಲಾಕ್ ಆಗುತ್ತಿದ್ದಂತೆ ನಗರ ಜನರು ಬರುವುದು ಹೆಚ್ಚಾಗಿದೆ. ಹೀಗಾಗಿ ನಗರದಲ್ಲಿ ಸಂಚಾರ
ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಜುಲೈ 7ರಿಂದ 16ವರೆಗೆ 10 ದಿನದಲ್ಲಿ ಒಟ್ಟು 999 ಪ್ರಕರಣಗಳು ದಾಖಲಾಗಿವೆ. 1,068 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 25 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
‘ಕೊರೊನಾವನ್ನು ಶತ್ರುವಂತೆ ಕಾಣಿ’: ಜಿಲ್ಲೆಯಲ್ಲಿ ನಿತ್ಯ 3ರಿಂದ 4 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಟೆಸ್ಟ್‌ಗೆ ಹೋಲಿಸಿಕೊಂಡರೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ. ಪಾಸಿಟಿವ್ ರೇಟ್ ಶೇ 2ಕ್ಕೆ ಇಳಿದಿದೆ. ಪ್ರಮಾಣ ಪ್ರಮಾಣವೂ ಕಡಿಮೆ ಇದೆ. ಜಿಲ್ಲೆಯಲ್ಲಿ ಜನರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮ ವ್ಯಾಪಕವಾಗಿ ನಡೆಯುತ್ತಿದೆ. ಇದು ಕೂಡ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವಾಗಿದೆ.
ಕೆಲವೆಡೆ ಸೋಂಕು ಇಲ್ಲದಿರಬಹುದು. ಇನ್ನೂ ಹಲವೆಡೆ ಸೋಂಕು ಇದೆ. ಈ ಸಂದರ್ಭದಲ್ಲಿ ಶತ್ರುವನ್ನು ಕಾಣುವಂತೆ ನಾವು ಕೊರಾನಾದಿಂದ ದೂರವಿರಬೇಕಾಗಿದೆ. ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಜಾಗೃತಿ ಹೆಚ್ಚಾಗಿದೆ. ಸರ್ಕಾರಿ ಕಚೇರಿ, ಸಾರ್ವಜನಿಕ
ಸ್ಥಳಗಳಲ್ಲಿ ಕೊರೊನಾ ಜಾಗೃತಿ ನಡೆಯುತ್ತಲೇ ಇದೆ. ಆದರೆ, ಜನರು ಸೋಂಕು ಕಡಿಮೆ ಇದೆ ಎಂದು ಮೈ ಮರೆತು ಮಾಸ್ಕ್ ಹಾಕದೇ, ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದಾರೆ. ಜನರು ಈಗಲೂ ಎಚ್ಚೆತ್ತು
ಕೊಳ್ಳದಿದ್ದರೆ ಮುಂದೆ ಅವರೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.