ಗುರುವಾರ , ಜುಲೈ 29, 2021
21 °C
600 ಸಮೀಪಿಸಿದ ಸೋಂಕಿತರ ಸಂಖ್ಯೆ, ಒಂದೇ ದಿನ 30 ಜನರಲ್ಲಿ ಪಾಸಿಟಿವ್

ಎಚ್‌1ಎನ್‌1ನಿಂದ ಮೃತಪಟ್ಟ ಮಹಿಳೆಗೂ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಎಚ್‌1ಎನ್‌1 ಸೋಂಕಿಗೆ ಒಳಗಾಗಿದ್ದ 64 ವರ್ಷದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದು ಅವರಲ್ಲೂ ಕೊರೊನಾ ಸೋಂಕು ಸಹ ಇರುವುದು ಪತ್ತೆಯಾಗಿದೆ. 

ಮೆಗ್ಗಾನ್‌ ಆಸ್ಪತ್ರೆಗೆ ಜೂನ್‌ 10ರಂದು ದಾಖಲಾಗಿದ್ದ ಟಿಪ್ಪುನಗರದ 7ನೇ ತಿರುವಿನ ಮಹಿಳೆಗೆ ಎಚ್1ಎನ್1 ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಪರೀಕ್ಷೆಯ ವರದಿಯೂ ಸಂಜೆ ವೇಳೆಗೆ ಬಂದಿದ್ದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 

ಗೋಪಾಳದ ಶಾರದ ಅಂಧರ ಶಾಲೆಯ ಬಳಿ ಇರುವ ಸ್ಮಶಾನದಲ್ಲಿ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದುವರೆಗೂ ಜಿಲ್ಲೆಯಲ್ಲಿ 11 ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 30 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದೆ. ಸೋಂಕಿತರಲ್ಲಿ 23 ಜನರು ಶಿವಮೊಗ್ಗ ನಗರದವರು. ಉಳಿದಂತೆ ಶಿಕಾರಿಪುರದ ಮೂವರು, ಸಾಗರದ ಒಬ್ಬರು ಹಾಗೂ ತೀರ್ಥಹಳ್ಳಿಯ ಮೂವರು ಇದ್ದಾರೆ. 

ಒಟ್ಟು ಸೋಂಕಿತರ ಸಂಖ್ಯೆ 598ಕ್ಕೇರಿದೆ. ಮಂಗಳವಾರ 12 ಜನರು ಸೇರಿದಂತೆ ಇದುವರೆಗೂ 239 ಜನರು ಗುಣಮುಖರಾಗಿದ್ದಾರೆ. 348 ಜನರು ವಿವಿಧ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಕುಟುಂಬದ ಮತ್ತಿಬ್ಬರಿಗೆ ಸೋಂಕು (ತೀರ್ಥಹಳ್ಳಿ  ವರದಿ): 

ತಾಲ್ಲೂಕಿನ ಕಳ್ಳಿಗದ್ದೆಯಲ್ಲಿ ಈ ಹಿಂದೆ ಸೋಂಕು ತಗುಲಿದ ಕುಟುಂಬದ ಇಬ್ಬರಲ್ಲಿ ಮಂಗಳವಾರ ಕೊರೊನಾ ಸೋಂಕು ಇರುವುದು ದ್ರಢಪಟ್ಟಿದೆ. 15 ವರ್ಷ ಬಾಲಕಿ ಹಾಗೂ 50 ವರ್ಷದ ಮಹಿಳೆ ಸೋಂಕಿಗೆ ಒಳಗಾಗಿದ್ದಾರೆ. ಇದರಿಂದಾಗಿ ಒಂದೇ ಕುಟುಂಬದ 8 ಮಂದಿಗೆ ಸೋಂಕು ತಗಲಿದಂತಾಗಿದೆ.

ಬೆಂಗಳೂರಿನಿಂದ ಪಟ್ಟಣದ ಸಮೀಪ ಮೇಲಿನ ಕುರುವಳ್ಳಿಗೆ ಬಂದ 26 ವರ್ಷದ ಯುವಕನಿಗೆ ಸೋಂಕು ತಗಲಿದೆ. ಈತ ಎಲ್ಲ ಕಡೆ ಸಂಚರಿಸಿದ್ದಾನೆ ಎನ್ನಲಾಗಿದೆ.
ಕೊರೊನಾ ಸೋಂಕು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಸಕ ಆರಗ ಜ್ನಾನೇಂದ್ರ, ತಹಶಿಲ್ದಾರ್ ಡಾ.ಎಸ್.ಬಿ.ಶ್ರೀಪಾದ್, ತಾಲ್ಲೂಕು ಪಂಚಾಯಿತಿ ಇಒ ಆಶಾಲತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಆಶೋಕ್ ಗ್ರಾಮ ಪಂಚಾಯತಿ ಗಳಿಗೆ ಭೇಟಿ ನೀಡಿದರು. ಸೋಂಕು ತಗಲಿದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ.

10 ವರ್ಷದ ಬಾಲಕನಿಗೆ ಸೋಂಕು (ಸಾಗರ ವರದಿ):

ನಗರದ ಜಿ.ಪಿ.ರಸ್ತೆಯ ನಿವಾಸಿ 10 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ಧೃಡಪಟ್ಟಿದೆ. ಬಾಲಕನ ತಂದೆ ಮತ್ತು ತಾಯಿ ಇಬ್ಬರೂ ಸೋಂಕಿತರಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನಿಗೂ ಅಲ್ಲಿಯೇ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.