ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗ್ಗಾನ್ ಭರ್ತಿ: ಆಮ್ಲಜನಕ ಹಾಸಿಗೆಗಳಿಗೆ ರೋಗಿಗಳ ಪರದಾಟ

Last Updated 6 ಮೇ 2021, 12:35 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಆಮ್ಲಜನಕ ಹಾಸಿಗೆಗಳ ಕೊರತೆ ಎದುರಾಗಿದೆ. ‘ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಲಭ್ಯವಿಲ್ಲ’ ಎಂದು ಇಲ್ಲಿನ ಪ್ರಮುಖ ಕೋವಿಡ್‌ ಕೇಂದ್ರ ಮೆಗ್ಗಾನ್ ಆಸ್ಪತ್ರೆಯ ಮುಂದೆ ಶುಕ್ರವಾರ ಫಲಕ ಹಾಕಲಾಗಿದೆ.

ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಸೇರಿದಂತೆ ಸುತ್ತಲ ಜಿಲ್ಲೆಗಳ ಪ್ರಮುಖ ಕೋವಿಡ್‌ ಕೇಂದ್ರ. ಆಸ್ಪತ್ರೆಯಲ್ಲಿ 800 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಆದರೆ, ಎಲ್ಲ ಹಾಸಿಗಳಿಗೂ ಆಮ್ಲಜನಕ ಅಳವಡಿಸುವ ಪರಿಕರಗಳಿಲ್ಲ. ಹಾಗಾಗಿ, 500 ಹಾಸಿಗಳಷ್ಟೆ ರೋಗಿಗಳಿಗೆ ಲಭ್ಯವಾಗಿವೆ.

ಪ್ರತಿ ದಿನ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗುತ್ತಿದೆ. ಜತೆಗೆ ನಿತ್ಯ ಹೊರ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಆಮ್ಲಜನಕದ ಅಗತ್ಯ ಇರುವ ರೋಗಿಗಳು ಮೆಗ್ಗಾನ್‌ಗೆ ಬರುತ್ತಿದ್ದಾರೆ. ಆಮ್ಲಜನಕ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನಷ್ಟು ಹಾಸಿಗೆಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಅಲ್ಲಿಯವರೆಗೂ ಆಮ್ಲಜನಕ ಹಾಸಿಗೆಗಳ ಸೌಲಭ್ಯ ಇರುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಮಾಹಿತಿ ನೀಡಿದರು.

ಅಂಕಿ ಅಂಶಗಳ ಮಧ್ಯೆ ವ್ಯತ್ಯಾಸ:
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ 16 ಸಾವಿರ ಲೀಟರ್ ಆಮ್ಲಜನಕದ ಟ್ಯಾಂಕ್‌ ಭರ್ತಿ ಇದೆ. ಈಗಾಗಲೇ 800 ಹಾಸಿಗೆಗಳಿಗೆ ಸಂಪರ್ಕ ನೀಡಲಾಗಿದೆ. ಎರಡು ದಿನಗಳಲ್ಲಿ ಮತ್ತೆ 300 ಹಾಸಿಗೆಗಳಿಗೆ ಸಂಪರ್ಕ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕೋವಿಡ್‌ ರೋಗಿಗಳ ಹಾಸಿಗೆಗಳು 500 ದಾಟಿಲ್ಲ.

ಆಮ್ಲಜನಕ ಪೂರೈಕೆ ಸೌಲಭ್ಯದ ಹಾಸಿಗೆಗಳು ಲಭ್ಯವಿಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT